ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯ 105 ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಪಂಚಾಯಿತಿಗಳು ಬೆಸ್ಕಾಂಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಇನ್ನೊಂದು ವಾರದೊಳಗೆ ಬಾಕಿ ಪಾವತಿಸದಿದ್ದರೆ ಅಂಥ ಗ್ರಾಪಂ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಹೌದು. ರಾಜಧಾನಿಯ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ 105 ಪಂಚಾಯಿತಿಗಳಲ್ಲಿ 80ಕ್ಕೂ ಹೆಚ್ಚು ಪಂಚಾಯಿತಿಗಳು ಕುಡಿಯುವ ನೀರು, ಬೀದಿದೀಪ, ಕಚೇರಿಗಳ ವಿದ್ಯುತ್ ಸಂಪರ್ಕ ಸೇರಿ ಇನ್ನಿತರ ವಿದ್ಯುತ್ ಮೂಲಗಳ ಬಿಲ್ ಬಾಕಿ ಉಳಿಸಿಕೊಂಡಿದ್ದು, ಇದುವರೆಗೆ 270 ಕೋಟಿ ರೂ. ಪಾವತಿಸಬೇಕಾಗಿದೆ. ಹಲವು ಬಾರಿ ನೋಟಿಸ್ ನೀಡಿದರೂ ಪಂಚಾಯಿತಿಯಿಂದ ಸಮರ್ಪಕ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಈ ಬಾರಿ ಕಠಿಣ ನಿಲುವು ತಾಳಿರುವ ಬೆಸ್ಕಾಂ ವಾರದ ಗಡುವು ನೀಡಿದೆ. ಅಷ್ಟರೊಳಗೆ ಬಾಕಿ ಬಿಲ್ ಪಾವತಿಸದಿದ್ದರೆ ಅಷ್ಟೂ ಪಂಚಾಯಿತಿಗಳ ವಿದ್ಯುತ್ ಸಂರ್ಪಕ ಕಡಿತಗೊಳಿಸುವ ಬಗ್ಗೆ ನೋಟಿಸ್ ಜಾರಿಗೊಳಿಸಿದೆ.
ಮೂಲಸೌಕರ್ಯಗಳಿಗೆ ಬಳಕೆ
105 ಪಂಚಾಯಿತಿಗಳ ಪೈಕಿ ಅಣ್ಣೇಶ್ವರ, ಬಾಶೆಟ್ಟಿಹಳ್ಳಿ ಸೇರಿ ಕೆಲವೊಂದು ಪಂಚಾಯಿತಿಗಳಲ್ಲಿ ಕೋಟ್ಯಂತರ ರೂ. ಅದಾಯವಿದ್ದರೆ ಬಹುತೇಕ ಗಡಿಯಂಚಿನ ಗ್ರಾಪಂಗಳಲ್ಲಿ ಲಕ್ಷ ರೂ.ಮುಟ್ಟುವುದು ದುಸ್ತರವಾಗಿದೆ. ಆದರೆ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲೂ ವಿದ್ಯುತ್ ಬಳಕೆ ಸಮ ಪ್ರಮಾಣದಲ್ಲಿದೆ. ಈ ಹಿನ್ನೆಲೆಯಲ್ಲಿ ಆದಾಯವಿರುವ ಪಂಚಾಯಿತಿಗಳಲ್ಲಿ ನಿಯಮಿತವಾಗಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದು, ಉಳಿಕೆ ಪಂಚಾಯಿತಿಗಳು ಬಾಕಿ ಪಾವತಿಸಲು ಹೆಣಗಾಡುತ್ತಿವೆ ಎನ್ನಲಾಗಿದೆ. ಬರುವ ಆದಾಯವನ್ನು ರಸ್ತೆ, ಚರಂಡಿ, ಕುಡಿಯುವ ನೀರು, ಆರೋಗ್ಯ ಮತ್ತಿತರ ಮೂಲಸೌಕರ್ಯಕ್ಕೆ ಬಳಸುತ್ತಿದ್ದು, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಎನ್ನಲಾಗಿದೆ.
3 ಅಥವಾ 4 ವರ್ಷಕ್ಕೊಮ್ಮೆ ಬಿಲ್ ಈ ಹಿಂದಿನಿಂದಲೂ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಬಿಲ್‌ಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ, ಬೆಸ್ಕಾಂ ನೋಟಿಸ್ ಬಳಿಕ ಸರ್ಕಾರದ ಗಮನ ಸೆಳೆದು ಹಣ ಬಿಡುಗಡೆ ಮಾಡಿಸಿಕೊಳ್ಳಬೇಕಿದೆ. ಮೂರ‌್ನಾಲ್ಕು ವರ್ಷಗಳಿಗೊಮ್ಮೆ ವಿದ್ಯುತ್ ಬಿಲ್ ಬಾಕಿ ಪಾವತಿಸುವುದು ನಡೆದುಕೊಂಡು ಬಂದಿದೆ. ಅದು ಈಗಲೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಬೀಳುತ್ತೆ ಬರೆ ಈಗಾಗಲೇ ಲೋಡ್‌ಶೆಡ್ಡಿಂಗ್ ಮತ್ತಿತರ ಕಾರಣಗಳಿಂದ ಗ್ರಾಪಂ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಇಲ್ಲದೆ ಪರದಾಡುತ್ತಿರುವ ಸಾರ್ವಜನಿಕರಿಗೆ ಬೆಸ್ಕಾಂ ನಿಲುವು ಗಾಯದ ಮೇಲೆ ಬರೆ ಎಳೆಯುವಂತಾಗುತ್ತದೆ. ಬಹುತೇಕ ಪಂಚಾಯಿತಿ ಕಚೇರಿಗಳಲ್ಲಿ ಯುಪಿಎಸ್ ಸೌಲಭ್ಯವಿಲ್ಲದೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇದರ ಜತೆಗೆ ವಿದ್ಯುತ್ ಕಡಿತಕ್ಕೆ ಬೆಸ್ಕಾಂ ಮುಂದಾದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಅತಿಹೆಚ್ಚು ನಂದಗುಡಿ: ಸೂಲಿಬೆಲೆ ಹಾಗೂ ನಂದಗುಡಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ನಂದಗುಡಿ, ನೆಲವಾಗಿಲು, ಇಟ್ಟಸಂದ್ರ, ಬೈಲನರಸಾಪುರ, ಶಿವನಾಪುರ, ಹೆತ್ತಕ್ಕಿ, ಸೂಲಿಬೆಲೆ, ಗಿಡ್ಡಪ್ಪನಹಳ್ಳಿ, ದೊಡ್ಡಹರಳಗೆರೆ, ಕಂಬಳೀಪುರ, ಲಕ್ಕೊಂಡಹಳ್ಳಿ ಸೇರಿ 11 ಗ್ರಾಪಂಗಳಿಗೆ ಬೆಸ್ಕಾಂ ನೋಟಿಸ್ ನೀಡಿದೆ. 7 ದಿನಗಳ ಒಳಗಾಗಿ ಬಾಕಿ ಮೊತ್ತ ಪಾವತಿಸಬೇಕು. ತಪ್ಪಿದಲ್ಲಿ ವಿದ್ಯುತ್ ನಿಲುಗಡೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಬೆಸ್ಕಾಂ ಜವಾಬ್ದಾರಿಯಾಗುವುದಿಲ್ಲ ಎಂದು ಎಇಇ ಪುಟ್ಟಸಾಮಯ್ಯ ಸೂಚನೆ ನೀಡಿದ್ದಾರೆ.
ಪ್ರಸ್ತುತ 270 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದ್ದು, ಈಗಾಗಲೇ 40 ಕೋಟಿ ರೂ.ಪಾವತಿಸಲಾಗಿದೆ, ಉಳಿಕೆ ಬಿಲ್ ಪಾವತಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ, ಶೀಘ್ರವೇ ಬಾಕಿ ಬಿಲ್ ಪಾವತಿಗೆ ಕ್ರಮಕೈಗೊಳ್ಳಲಾಗುವುದು. ಬೆಸ್ಕಾಂ ಅಧಿಕಾರಿಗಳ ಜತೆಗೆ ಸಂಪರ್ಕದಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ರೇವಣಪ್ಪ ಜಿಪಂ ಸಿಇಒ ಸರ್ಕಾರದ ಆದೇಶವನ್ನು ಬೆಸ್ಕಾಂ ಪಾಲಿಸಲಿದೆ. ಇದರಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ, ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರೊಂದಿಗೆ ಸಮನ್ವಯತೆಯೊಂದಿಗೆ ಮುಂದಿನ ಕ್ರಮಕೈಗೊಳ್ಳಲಾಗುವುದು, ಸರ್ಕಾರದ ಆದೇಶದಂತೆ ಬಿಲ್ ಪಾವತಿಸದ ಗ್ರಾಪಂಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಶೋಕ್ ಹೊಸಕೋಟೆ ವಿಭಾಗ ಇಇ