ಹುಲಸೂರು: ಮನುಷ್ಯ ಹಲವಾರು ಸಮಸ್ಯೆಯಿಂದ ಜೀವನ ನಾಶ ಮಾಡಿಕೊಳ್ಳುತ್ತಿದ್ದಾನೆ. ತಮ್ಮ ನೆಮ್ಮದಿ ಜೀವನಕ್ಕೆ ಸಂಗೀತ ಪೂರಕವಾಗಿದೆ ಎಂದು ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಗುರು ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿರುವ ಹಾನಗಲ್ ಗುರು ಕುಮಾರ ಶಿವಯೋಗಿಗಳ ಸಂಗೀತ ಪಾಠ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಚಾಕ್ಷರಿ ಗವಾಯಿಗಳ ೮೦ನೇ ಪುಣ್ಯಸ್ಮರಣೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿಗಳ ಕೊಡುಗೆ ಅಪಾರ. ತಮ್ಮ ಎರಡು ಕಣ್ಣು ಕಾಣದಿದ್ದರೂ ಸಹ ವಿಶ್ವಕ್ಕೆ ಸಂಗೀತದ ರುಚಿ ಹೇಳಿಕೊಟ್ಟಿದ್ದಾರೆ. ಸಾವಿರಾರು ಅಂದ ಸಂಗೀತಗಾರರಿಗೆ ಮತ್ತು ಅಂಗವಿಕಲರಿಗೆ ಸಂಗೀತ ಕಲಿಸಿ ದಾರಿ ತೋರಿಸಿಕೊಟ್ಟಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ ಮಾತನಾಡಿ, ಸಂಗೀತದಲ್ಲಿ ಅದ್ಭುತವಾದ ಶಕ್ತಿ ಅಡಗಿದೆ. ಆಸಕ್ತಿ ಇದ್ದವರು ಸಂಗೀತ ಪಾಠ ಶಾಲೆಯಲ್ಲಿ ಪ್ರವೇಶ ಪಡೆದು ಖ್ಯಾತ ಸಂಗೀತಗಾರರಾಗಿ ಸೇವೆ ಸಲ್ಲಿಸಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ ಖಪಲೆ , ಬಿ.ಆರ್.ಕೌಟೆ ಮಾತನಾಡಿದರು. ಸಂಗೀತಗಾರ ಶೇಖರ ಇಮ್ಮಡಿ ರಬಕವಿ ಅಧ್ಯಕ್ಷತೆ ವಹಿಸಿದ್ದರು.
ಜಗದೀಶ ಮಠಪತಿ, ಕವಿತಾ ಮಲ್ಲಿಕಾರ್ಜುನ ಸ್ವಾಮಿ, ಪ್ರೇಮ ಗೌಂಡಗಾವೆ, ಬಸವರಾಜ ಸ್ವಾಮಿ, ಚನ್ನವೀರಯ್ಯ, ಪ್ರೀತಿ ಗೌಂಡಗಾವೆ ಇತರರಿದ್ದರು.
ವೀರೇಶ ಇಲ್ಲಾಮಲೆ ಹಾಗೂ ರೇಖಾ ಕಾಡಾದಿ ಪ್ರಾರ್ಥಿಸಿದರು. ಬಸವರಾಜ ರಗಟೆ ಸ್ವಾಗತಿಸಿದರು. ಗದಗಯ್ಯ ಮಠಪತಿ ನಿರೂಪಣೆ ಮಾಡಿದರು.