ಜಿಲ್ಲೆ

801 ಸಂತ್ರಸ್ತರಿಗೆ ಪರಿಹಾರ ವಿತರಣೆ

ಹುಬ್ಬಳ್ಳಿ: ಎಸ್.ಎಂ. ಕೃಷ್ಣಾನಗರ, ಸದರಸೋಫಾ, ಇನ್ನಿತರ ಕಡೆ ಶೀಘ್ರವೇ ನಾಲಾ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಂಡು ಮನೆಗಳಿಗೆ ನೀರು ನುಗ್ಗುವ ಅಪಾಯವನ್ನು ತಪ್ಪಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಎಸ್.ಎಂ. ಕೃಷ್ಣಾ ನಗರ, ಸದರ ಸೋಫಾ, ಮೇದಾರ ಓಣಿ, ನಾರಾಯಣಸೋಫಾ ಸೇರಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಹಾನಿಗೊಳಗಾದ 801 ಸಂತ್ರಸ್ತರಿಗೆ ಸರ್ಕಾರದಿಂದ ಮಂಜೂರಾದ ತಲಾ 10 ಸಾವಿರ ರೂ. ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದರು.

ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜನರ ಬಹುದಿನದ ಬೇಡಿಕೆಯಾದ ಆಸ್ಪತ್ರೆ ನಿರ್ಮಾಣ ಕಾರ್ಯವು ಮುಕ್ತಾಯಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ ಎಂದರು.

ಕಾಂಗ್ರೆಸ್ ಮುಖಂಡ ಬಾಬಾಜಾನ್ ಕಾರಡಗಿ ಮಾತನಾಡಿ, ಈ ಭಾಗದ ಶಾಸಕರು ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಸೇರಿ ಹಲವು ಮೂಲ ಸೌಕರ್ಯಗಳ ಕೊರತೆ ನೀಗಿಸಿದ್ದಾರೆ ಎಂದರು.

ಕಂದಾಯ ಇಲಾಖೆಯ ರವಿ ಬೆನ್ನೂರು, ಶಬ್ಬೀರ್ ನದಾಫ್, ಮುಖಂಡರಾದ ಇರ್ಷಾದ್ ಬ್ಯಾಹಟ್ಟಿ, ರವಿ ಮಾನಶೆಟ್ಟರ್, ಮಹಮ್ಮದ ಹನೀಫ್ ಫುಲದನಿ, ಯಲ್ಲಪ್ಪ ಮೆಹರವಾಡೆ, ಜಾಫರ್ ಸೋಲಾಪುರಿ, ಜಾಕಿರ್ ಅತ್ತಾರ್, ಜಿಲಾನಿ ಕಾರಡಗಿ, ಶಮದ ಗುಲಬರ್ಗ, ಜಮೀರ್ ಮುಲ್ಲಾ, ಇತರರು ಇದ್ದರು.