ಜಿಲ್ಲೆ

ಕ್ಷೇತ್ರದ ಅಭಿವೃದ್ಧಿಗೆ 800 ಕೋಟಿ ರೂ. ಅನುದಾನ

ಗಂಗಾಧರ ಬಿ ವಿ

ರಾಮನಗರ

ಕ್ಷೇತ್ರದ ಅಭಿವೃದ್ದಿಯೇ ನನ್ನ ಧ್ಯೇಯವಾಗಿದ್ದು, ಸಿಕ್ಕಿರುವ ಅವಕಾಶದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಎಚ್​.ಎ. ಇಕ್ಬಾಲ್​ ಹುಸೇನ್​ ತಿಳಿಸಿದರು.

ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ 11 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.  ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಮೇಲೆ ಒಂದೂವರೆ ವರ್ಷದಲ್ಲಿ 800 ಕೋಟಿ ರೂ. ಅನುದಾನ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಿಗೆ ಮುಂದಾಗುತ್ತೇನೆ. ಇಂದು ಒಂದೇ ದಿನ ಕ್ಷೇತ್ರದಲ್ಲಿ 100 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಗೆ 28 ರೂ. ಕೋಟಿ, ನಗರ ಪ್ರದೇಶದ ಅಭಿವೃದ್ಧಿಗೆ 72 ಕೋಟಿ ರೂ. ಮಂಜೂರಾಗಿದೆ ಎಂದರು.

ಕಾಳೇಗೌಡನದೊಡ್ಡಿ ಏತನೀರಾವರಿ ಯೋಜನೆ ಬಹುವರ್ಷಗಳ ಬೇಡಿಕೆಯಾಗಿತ್ತು. ಇಂದು ಕಾರ್ಯಗತವಾಗುತ್ತಿದೆ. ಇದಕ್ಕೆ ಹಿಂದೆ ಡಿ.ಕೆ.ಸುರೇಶ್​ ಸಹಕಾರ ಕಾರಣ. ಈ ಕಾಮಗಾರಿಯಿಂದ ಮೇಲ್ಭಾಗದ ಕೆರೆಕಟ್ಟೆಗಳು ತುಂಬಿ ಅಂತರ್ಜಲ ವೃದ್ಧಿಯಾಗಲಿದೆ. ಕಾಳೇಗೌಡನದೊಡ್ಡಿ ಸಮೀಪದ ಅರ್ಕಾವತಿ ನದಿಯಿಂದ 16.5 ಕಿಮೀ ದೂರದವರೆಗೆ ನೀರು ಹರಿಯಲಿದೆ.  ಮಂಚನಬೆಲೆ ಎಡ ಬಲ ಕಾಲುವೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದ್ದು, ನಾಲೆಗಳ ಆಧುನೀಕರಣಕ್ಕೆ 20 ಕೋಟಿ ರೂ. ಅನುದಾನ ತರಲಾಗಿದೆ ಎಂದರು.

ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ನಾನು ಶಾಸಕನಾಗಿದ್ದಾಗ ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಬಿಳಗುಂಬ ಗ್ರಾಮದಲ್ಲಿ ಒಂದು ಬಾರಿ ನೀರಿಲ್ಲದ ಕಾರಣ ಯುಗಾದಿ ಹಬ್ಬವನ್ನೇ ಆಚರಿಸಿರಲಿಲ್ಲ. ಅರ್ಕಾವತಿ ನದಿ ಪಕ್ಕದಲ್ಲಿ ಎತ್ತರದ ಪ್ರದೇಶದಲ್ಲಿರುವ ಈ 11 ಗ್ರಾಮಗಳಲ್ಲಿ ಅಂತರ್ಜಲಮಟ್ಟ ಕುಸಿದು ಸಾವಿರಾರು ಅಡಿ ಆಳಕ್ಕೆ ಬೋರ್​ ವೆಲ್​ ಕೊರೆದರೂ ಹನಿ ನೀರು ಸಿಗದಂತಾಗಿತ್ತು. ಈ ಯೋಜನೆ ಇಲ್ಲಿನ ಜನರ ಬದುಕು ಸುಧಾರಿಸಲಿದೆ ಎಂದರು.

ಸಣ್ಣ ನೀರಾವರಿ ಇಇ ಕೊಟ್ರೇಶ್​, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್​. ರಾಜು, ಬಿಳುಗುಂಬ ಗ್ರಾಪಂ ಅಧ್ಯಕ್ಷ ನವೀನ್​ಗೌಡ, ಮಾಜಿ ಅಧ್ಯಕ್ಷ ಪ್ರಭು, ಸದಸ್ಯರಾದ ಚಿಕ್ಕಸ್ವಾಮಿ, ರೂಪಾ, ಮುಖಂಡರಾದ ದೊಡ್ಡವಿರೇಗೌಡ, ಜಯಕರ್ನಾಟಕ ರವಿ, ಚಂದ್ರಶೇಖರ್​, ಮಂಚೇಗೌಡ, ಚಿಕ್ಕವಿರೇಗೌಡ, ರೇವಣ್ಣ, ಮಹೇಂದ್ರ, ಲೋಕೇಶ್​ ಇದ್ದರು.

ಎಚ್​ಡಿಕೆ ವಿರುದ್ಧ ರವಿ ವಾಗ್ದಾಳಿ

ಡಿ.ಕೆ.ಶಿವಕುಮಾರ್​ ಅವರನ್ನು ಬೈಯ್ಯುವುದಕ್ಕೆಂದೇ ರಾಜ್ಯಕ್ಕೆ ಬರುವ ಕುಮಾರಸ್ವಾಮಿ ಕ್ಷೇತ್ರದ ಶಾಸಕರಾಗಿ, ಎರಡುಬಾರಿ ಮುಖ್ಯಮಂತ್ರಿಯಾಗಿದ್ದರು. ಇಂತಹ ಕೆಲಸ ಅವರು ಏಕೆ ಮಾಡಲಿಲ್ಲ. ಡಿ.ಕೆ. ಸುರೇಶ್​ ಅವರ ಪರಿಶ್ರಮದಿಂದ ಕಾಮಗಾರಿಗೆ ಚಾಲನೆ ಸಿಕ್ಕಿತು. ವರ್ಷ ಪೂರ್ತಿ ಅರ್ಕಾವತಿ ನದಿಯಲ್ಲಿ ನೀರು ಹರಿಯಬೇಕು ಎಂಬ ಸಂಕಲ್ಪದಿಂದ ಅವರು ಈ ಯೋಜನೆ ರೂಪಿಸಿದರು. ಮುಂದಿನ ದಿನಗಳಲ್ಲಿ ಅರ್ಕಾವತಿ ಜೀವ ನದಿಯಾಗಲಿದೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ರವಿ ತಿಳಿಸಿದರು.

ಟೀಕೆ ಟಿಪ್ಪಣಿ ಮಾಡಬೇಕಾದರೆ ಆರೋಗ್ಯಕರವಾಗಿರಬೇಕು. ಆದರೆ, ಎಚ್​ಡಿಕೆ ಸುಳ್ಳನ್ನು ಹೇಳಿ ನಾನೊಬ್ಬನೇ ರೈತರಿಗಾಗಿ ಇರುವವನು, ನಾನೇ ಸತ್ಯ ಹರಿಶ್ಚಂದ್ರ ಎಂದು ಬೇರೆಯವರ ಬಗ್ಗೆ ಕೀಳುಭಾಷೆ ಪದ ಉಪಯೋಗಿಸುತ್ತಾರೆ. ಇಂತಹ ಬೂಟಾಟಿಕೆ ಸಮಯಸಾಧಕತನ ಬಿಟ್ಟು ಅಭಿವೃದ್ಧಿ ಕಡೆ ಗಮನನೀಡಲಿ. ಮುಖ್ಯಮಂತ್ರಿ ಆಗಿದ್ದಾಗ ಇಂತಹ ಯೊಜನೆಗಳನ್ನು ತರಲಿಲ್ಲ. ಮಾತು ಬಿಟ್ಟು ರಾಜ್ಯದ ಅಭಿವೃದ್ಧಿಯ ಮಾತಾಡಲಿ.

> ಕೆ. ರಾಜು, ಮಾಜಿ ಶಾಸಕ