ಜಿಲ್ಲೆ

80 ಸಾವಿರ ಕುಟುಂಬಗಳಿಗೆ ಸಿಲಿಂಡರ್

ಕಾರವಾರ: ಜಿಲ್ಲೆಯ 80 ಸಾವಿರ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ ಉಚಿತವಾಗಿ ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಡಿಡಿ ಪುಟ್ಟಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿಗೆ ತಲಾ ಒಂದೊಂದು ಸಿಲಿಂಡರ್ ಸಿಗಲಿದೆ. ಸಿಲಿಂಡರ್ ಪಡೆಯುವ ಸಂದರ್ಭದಲ್ಲಿ ಗ್ರಾಹಕರು ವಿತರಕರಿಗೆ ನಗದು ಹಣ ಪಾವತಿಸಬೇಕು. ಆ ಮೊತ್ತ ಸಂಬಂಧಪಟ್ಟ ಗ್ರಾಹಕನ ಆಧಾರ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಆಯಾ ತಿಂಗಳ ಉಚಿತ ಸಿಲಿಂಡರ್​ನ್ನು ಅದೇ ತಿಂಗಳು ಪಡೆಯಬೇಕು. ಒಂದೇ ತಿಂಗಳು ಎರಡು ಉಚಿತ ಸಿಲಿಂಡರ್ ಸೌಲಭ್ಯ ಸಿಗದು. ಇನ್ನು ಗ್ರಾಹಕರು ಎಂದಿನಂತೆ ಮೊಬೈಲ್ ಮೂಲಕ ಸಿಲಿಂಡರ್ ಬುಕ್ ಮಾಡಿದಾಗ ಒಟಿಪಿ ಸಂದೇಶ ಬರಲಿದ್ದು, ಅದನ್ನು ತೋರಿಸಿ ಸಿಲಿಂಡರ್ ಪಡೆದುಕೊಳ್ಳಬೇಕು ಎಂದರು.

ಎಚ್​ಪಿಸಿಎಲ್ ಕಂಪನಿಯ ಚೀಫ್ ಮ್ಯಾನೇಜರ್ ಎಸ್.ಎನ್. ಮಷಾಲ್ಡಿ ಮಾತನಾಡಿ, ಎಲ್ಲ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಬಂಕ್​ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಕಂಪನಿಗಳ ಸಹಭಾಗಿತ್ವದಲ್ಲಿ 5 ಲಕ್ಷದವರೆಗೆ ಜೀವ ವಿಮಾ ಸೌಲಭ್ಯ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕಂಪನಿಯ ಉತ್ತರ ಕನ್ನಡ ಜಿಲ್ಲಾ ನೋಡಲ್ ಅಧಿಕಾರಿ, ಅಭಿಜಿತ್ ರಾವತ್ ಮಾತನಾಡಿ, ಜಿಲ್ಲೆಯಲ್ಲಿ 15 ಪೆಟ್ರೋಲ್ ಬಂಕ್​ಗಳಿದ್ದು, ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ವಿತರಣೆಯಾಗುತ್ತಿದೆ. ಸದ್ಯ ಸಾಕಷ್ಟು ಇಂಧನ ಸಂಗ್ರಹವಿದ್ದು, ಯಾವುದೇ ತೊಂದರೆ ಇಲ್ಲ ಎಂದರು.

ಜನರು ಆತಂಕ: ಎಚ್​ಪಿಸಿಎಲ್ ಕಂಪನಿ ಕಾರವಾರ ವಿತರಕ ಸುನೀಲ ನಾಯ್ಕ ಸೋನಿ ಮಾತನಾಡಿ, ಸಾಕಷ್ಟು ಜನರು ಗಾಬರಿಗೊಂಡು ಸಿಲಿಂಡರ್​ಗಳನ್ನು ಬುಕ್ ಮಾಡುತ್ತಿದ್ದಾರೆ. ಇದರಿಂದ ವಿತರಣೆಯಲ್ಲಿ ಕೊಂಚ ವ್ಯತ್ಯಯ ಉಂಟಾಗುತ್ತಿದೆ. ಹಲವು ಅಡೆತಡೆ ನಡುವೆಯೂ ಸಿಲಿಂಡರ್ ಮನೆಗೆ ತಲುಪಿಸಲು ಬದ್ಧರಾಗಿದ್ದೇವೆ ಎಂದರು.