ವಿಜಯವಾಣಿ ಸುದ್ದಿಜಾಲ ಧಾರವಾಡ
ಅಧಿಕ ಮಾಸದ ಅಂಗವಾಗಿ ನಗರದ ಅದ್ವೈತ ಪ್ರಭೋಧಕ ಸಂಘದ ವತಿಯಿಂದ ಇಲ್ಲಿನ ಶ್ರೀರಾಮ ಪರಿವಾರ, ವೇದ ಪಾಠ ಶಾಲೆ ಆವರಣದಲ್ಲಿ ಶುಕ್ರವಾರ ಸಹಸ್ರ ಚಂದ್ರದರ್ಶನ ಹೋಮ ನಡೆಸಿ 80 ವರ್ಷ ಪೂರೈಸಿದ 33 ಹಿರಿಯ ದಂಪತಿಗಳಿಗೆ ಸನ್ಮಾನಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಅದ್ವೈತಾಶ್ರಮದ ಶ್ರೀ ಪ್ರಣವಾನಂದ ತೀರ್ಥ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಇಂತಹ ವಿಶಿಷ್ಟ ಹಾಗೂ ಅಪರೂಪದ ಕಾರ್ಯ ನಡೆಸಿದ ಸಂಘದ ಕಾರ್ಯ ಶ್ಲಾಘನೀಯ. ಸಂಘವು ಬಡ ಹಾಗೂ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾಡುತ್ತಿರುವ ಆರ್ಥಿಕ ಸಹಾಯದ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದು ಉತ್ತಮ ದಾರಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ರವಿ ದೇಶಪಾಂಡೆ ಮಾತನಾಡಿ, ಈ ವರೆಗೆ ಸಂಘ ನಡೆದು ಬಂದ ದಾರಿ, ಏರ್ಪಡಿಸಿದ್ದ ಅನೇಕ ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಈ ಕಾರ್ಯಗಳಿಗೆ ಎಲ್ಲ ಸಹಕಾರ, ಸಹಾಯ ಸದಾ ಇರಲಿ ಎಂದು ಕೋರಿದರು.
ಸಂಘದ ಕಾರ್ಯಕಾರಿಣಿ ಸದಸ್ಯರು, ಕುಟುಂಬಸ್ಥರು, ಇತರರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಗುರುನಾಥ ಇನಾಮದಾರ ನಿರೂಪಿಸಿದರು.