ಜಿಲ್ಲೆ

ಶೇ.80ರಷ್ಟು ಅಹವಾಲು ಪರಿಹಾರ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಮುದ್ದುಮಾದೇವ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಹಿಂದಿನ ಕುಂದುಕೊರತೆ ಸಭೆಯಲ್ಲಿ ಮುಖಂಡರು ಕೇಳಿದ ಶೇ.80ರಷ್ಟು ಅಹವಾಲುಗಳನ್ನು ಪರಿಹರಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದರು.
ಪರಿಶಿಷ್ಟ ಜಾತಿಯ ಕೆಲ ಕಾಲನಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಕೆಲ ಕಡೆ ಕಳ್ಳಬಟ್ಟಿ ಮಾರಾಟವಾಗುತ್ತಿದೆ. ಮಾದಾಪುರ ಉಪ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ರಾತ್ರಿ ಹೊತ್ತು ಗಸ್ತು ಇಲ್ಲದಂತಾಗಿದೆ ಎಂದು ಕಾರ್ಮಿಕ ಮುಖಂಡ ಎಚ್.ಪಿ.ಸೋಮಪ್ಪ ಅರೋಪಿಸಿದರು. ಹೊಸತೋಟ ಜಂಕ್ಷನ್‌ನಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು ಎಂದು ಆಗ್ರಹಿಸಿದರು.

ವಲ್ಲಭಭಾಯಿ ರಸ್ತೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು, ಅಲ್ಲಿ ಕಳ್ಳತನ ಹೆಚ್ಚುತಿದ್ದೆ. ಬಾಣಾವರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಬಳಿ ಇರುವ ಬಸ್ ನಿಲ್ದಾಣ ಮದ್ಯ ಸೇವಿಸುವ ಅಡ್ಡೆಯಾಗಿದೆ. ಪಟ್ಟಣದೊಳಗೆ ಗಾಂಜಾ ಸೇವನೆ ಹೆಚ್ಚುತ್ತಿದೆ ಎಂದು ಪಂಚಾಯಿತಿ ಸದಸ್ಯೆ ಮೋಹಿನಿ ಹೇಳಿದರು.

ಸೋಮವಾರ ಸಂತೆಯ ದಿನದಂದು ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದ್ದು, ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅವರಿಗೆ ಪೊಲೀಸರು ತಿಳಿವಳಿಕೆ ನೀಡಬೇಕು ಎಂದು ಜಯಪ್ಪ ಹಾನಗಲ್ ತಿಳಿಸಿದರು. ಎಸ್.ಸಿ. ಕಾಲನಿಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂದು ಎಸ್.ಈ. ಸುರೇಶ್ ಹೇಳಿದರು. ಸಭೆಯಲ್ಲಿ ಬಿ.ಈ.ಜಯೇಂದ್ರ, ಎಂ.ಪಿ.ಹೊನ್ನಪ್ಪ ಇತರರು ಇದ್ದರು.