ರಾಯಲ್ಪಾಡು: ರಾಯಲ್ಪಾಡು ಸಮೀಪದ ಗುಂಟಿಪಲ್ಲಿ ಕ್ರಾಸ್ ಬಳಿಯ ಮೀಸಲು ಅರಣ್ಯಕ್ಕೆ ಗುರುವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿರುವ 8 ಹೆಕ್ಟೇರ್ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಬೆಟ್ಟದಹುಲ್ಲು, ಹೊಂಗೆ ಹಾಗೂ ಇತರ ಜಾತಿಯ ನೂರಾರು ಮರಗಿಡಗಳು ಸುಟ್ಟುಭಸ್ಮವಾಗಿವೆ. ಅಲ್ಲದೆ ಅರಣ್ಯ ಪ್ರದೇಶದ ಪಕ್ಕದಲ್ಲಿಯೇ ಇದ್ದ ರೈತರ ಜಮೀನಿಗೂ ಬೆಂಕಿ ಹಬ್ಬಿದ ಹಿನ್ನೆಲೆಯಲ್ಲಿ ಕನಕಾಂಬರ ಗಿಡಗಳು, ಡ್ರಿಪ್ ಪೈಪುಗಳು ಶಾಖದಿಂದ ಹಾನಿಗೊಳಗಾಗಿವೆ.