ಜಿಲ್ಲೆ

8 ವರ್ಷಗಳಾದರೂ ಕೆಲಸ ಅಪೂರ್ಣ

ರಾಜೇಂದ್ರ ಶಿಂಗನಮನೆ ಶಿರಸಿ

ಮಕ್ಕಳ ಹಾಗೂ ತಾಯಿ ಮರಣ ಪ್ರಮಾಣಕ್ಕೆ ನಿಯಂತ್ರಣ ತರಲು 2011-12ನೇ ಸಾಲಿನಲ್ಲಿ ಮಂಜೂರಾಗಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿದೆ. ಎಂಟು ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

60 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ನಿರ್ವಣಕ್ಕೆ ಸರ್ಕಾರದಿಂದ 14 ಕೋಟಿ ರೂಪಾಯಿ ಮಂಜೂರಾಗಿ ಈವರೆಗೆ ಶೇ.50ರಷ್ಟು ಕಾಮಗಾರಿ ನಡೆದಿದ್ದು, ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದ ಸ್ವೀಟ್ ಹೋಮ್್ಸ ಕ್ರಿಯೇಷನ್ಸ್ ಗುತ್ತಿಗೆ ಸಂಸ್ಥೆಯ ವಿಳಂಬ ನೀತಿಯೇ ಇದಕ್ಕೆ ಕಾರಣವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಹಲವು ಕಾಮಗಾರಿ ಬಾಕಿ: ಆಸ್ಪತ್ರೆಯ ಕಟ್ಟಡ ಶೇ.50ರಿಂದ ಶೇ.60ರಷ್ಟಾಗಿದೆ. ಆದರೆ ಆಸ್ಪತ್ರೆಯಲ್ಲಿ ಮುಖ್ಯವಾಗಿ ಹೆರಿಗೆ, ಸಿಸೇರಿಯನ್ ವಿಭಾಗ, ನವಜಾತ ಶಿಶುಗಳ ಆರೈಕೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳು, ಶೌಚಗೃಹ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಪೀಠೋಪಕರಣಗಳ ಅಳವಡಿಕೆ ಸೇರಿ ಇತರ ಕಾಮಗಾರಿಗಳು ನಡೆಯಬೇಕಿದೆ. ಪ್ರಸ್ತುತ ಕಟ್ಟಡದಲ್ಲಿ ಕೆಲ ಕಾಮಗಾರಿ ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳು ನಡೆಯಬೇಕಿದೆ.

ನೆರೆ ತಾಲೂಕಿನವರಿಗೂ ಸಂಕಷ್ಟ: ಪ್ರಸ್ತುತ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಹೆರಿಗೆ ಪ್ರಕರಣಗಳು ನೆರೆಹೊರೆಯ ತಾಲೂಕುಗಳಾದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಾನಗಲ್, ಸೊರಬ ಭಾಗದಿಂದ ಬರುತ್ತಿವೆ. ತಿಂಗಳಿಗೆ ಕನಿಷ್ಠ 400ರಷ್ಟು ಹೆರಿಗೆ ಈ ಆಸ್ಪತ್ರೆಯಲ್ಲಿ ಆಗುತ್ತದೆ. ತಜ್ಞ ವೈದ್ಯರ ಕೊರತೆ, ಸೌಲಭ್ಯಗಳ ಕೊರತೆ ಕಾರಣಕ್ಕೆ ಕೆಲ ಬಾರಿ ತಾಯಿ, ಮಕ್ಕಳ ಮರಣವಾಗುವ ಸಾಧ್ಯತೆ ಇರುತ್ತದೆ. ಜತೆ, ವೈದ್ಯ, ಸಿಬ್ಬಂದಿ ಕೊರತೆಯಿರುವ ಕಾರಣ ಕೆಲ ಬಾರಿ ಗರ್ಭಿಣಿಯರು, ನವಜಾತ ಶಿಶುಗಳು ಆಸ್ಪತ್ರೆಗೆ ಬಂದು ವಾಪಸ್ಸಾಗುವ ಸಾಧ್ಯತೆ ಇದೆ. ಈ ಸಮಸ್ಯೆ ನಿವಾರಣೆಗಾಗಿ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಿ ಮಾಡಲಾಗಿತ್ತು. ಆದರೆ ಇಂದಿಗೂ ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ. ಹೀಗಾಗಿ ನೆರೆಹೊರೆಯ ತಾಲೂಕುಗಳ ರೋಗಗಳು ಕೂಡ ಸಮಸ್ಯೆಯ ಸುಳಿಗೆ ಸಿಲುಕುವಂತಾಗಿದೆ.

ಸೆಪ್ಟೆಂಬರ್ ತಿಂಗಳೊಳಗೆ ಮುಗಿಸುತ್ತೇವೆ: ಆಸ್ಪತ್ರೆ ನಿರ್ವಿುಸುವ ಜಾಗದಲ್ಲಿದ್ದ ಆರೋಗ್ಯ ಇಲಾಖೆ ಕ್ವಾರ್ಟರ್ಸ್ ಕೆಡವಲು ವರ್ಷಗಳನ್ನು ತೆಗೆದುಕೊಂಡ ಗುತ್ತಿಗೆದಾರರು ನಂತರ ಯೋಜನೆ ಹಾಗೂ ನೀಲನಕ್ಷೆ ಸಿದ್ಧಪಡಿಸುವಲ್ಲಿಯೂ ನಿಷ್ಕಾಳಜಿ ತೋರಿದ್ದರು. ಗುತ್ತಿಗೆದಾರರ ವಿಳಂಬ ನೀತಿಗೆ ಬೇಸತ್ತು ಇಲಾಖೆಯಿಂದ ನೋಟಿಸ್ ಕೂಡ ನೀಡಲಾಗಿತ್ತು. ಸ್ಥಳೀಯ ಶಾಸಕರು 10ಕ್ಕೂ ಹೆಚ್ಚು ಬಾರಿ ಸಭೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿಯೂ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಕಾಮಗಾರಿ ಆರಂಭಿಸಿದರೂ ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ. ಈ ಕುರಿತು ಗುತ್ತಿಗೆದಾರರನ್ನು ಕೇಳಿದರೆ, ಬರುವ ಸೆಪ್ಟೆಂಬರ್ ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸುತ್ತಾರೆ.

2020ರ ಮೇ 31ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕರೊನಾ ಕಾರಣಕ್ಕೆ ವಿಳಂಬವಾಗಿದೆ. ಅಲ್ಲದೆ, ಆಸ್ಪತ್ರೆಯ ಮುಂಭಾಗವನ್ನು ಮಾತ್ರ ಪೂರ್ತಿಗೊಳಿಸಿಕೊಡುತ್ತೇವೆ. ನಂತರದ ಕಾಮಗಾರಿಯನ್ನು ಹಂತ ಹಂತವಾಗಿ ಮುಗಿಸುತ್ತೇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಈ ರೀತಿಯ ಕ್ರಮ ಸರಿಯಲ್ಲ. ಶೀಘ್ರವೇ ಇಡೀ ಕಟ್ಟಡವನ್ನು ಪೂರ್ಣಗೊಳಿಸಿ ಆಸ್ಪತ್ರೆ ಆಡಳಿತಕ್ಕೆ ಹಸ್ತಾಂತರಿಸಬೇಕು. | ಡಾ. ಗಜಾನನ ಭಟ್ಟ ಆಸ್ಪತ್ರೆ ವೈದ್ಯಾಧಿಕಾರಿ