ಬೀದರ್: ಹುಮನಾಬಾದ್ ಹೊರವಲಯದ ಕೈಗಾರಿಕೆ ಪ್ರದೇಶದಲ್ಲಿ ಕೆಲ ಕಾರ್ಖಾನೆಗಳಿಂದ ಜಲ ಮೂಲಗಳಿಗೆ ವಿಷಕಾರಿ ತ್ಯಾಜ್ಯ ಸೇರಿ ಮಾಲಿನ್ಯವಾಗುತ್ತಿರುವ ಹಿನ್ನೆಲೆಯಲ್ಲಿ 8 ಟೈರ್ ಪೈರೋಲಿಸಿಸ್ ಘಟಕಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶ ನೀಡಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪರಿಸರ ಖಾತೆ ವಹಿಸಿಕೊಂಡ ಬಳಿಕ ಹುಮನಾಬಾದ್ ಕೈಗಾರಿಕೆ ಪ್ರದೇಶದ ಮಾಲಿನ್ಯ ನಿಯಂತ್ರಣಕ್ಕೆ ಮತ್ತು ಅಕ್ರಮ ಕೈಗಾರಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರಿಂದ ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ತೀವ್ರ ಸ್ವರೂಪದಲ್ಲಿ ಮಾಲಿನ್ಯ ಉಂಟು ಮಾಡುತ್ತಿದ್ದ 8 ಟೈರ್ ಪೈರೋಲಿಸಿಸ್ ಘಟಕಗಳನ್ನು ಮುಚ್ಚಲು ಕ್ರಮ ಕೈಗೊಂಡಿದೆ. ಎರಡು ಔಷಧ ತಯಾರಿಕಾ ಘಟಕ ಬಂದ್ ಮಾಡುವಂತೆಯೂ ಅಂತಿಮ ನೋಟಿಸ್ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೈರ್ ಪೈರೋಲಿಸಿಸ್ ಘಟಕಗಳಿಂದ ಹೆಚ್ಚಿನ ಜಲಮಾಲಿನ್ಯ ಆಗುತ್ತಿರುವ ಕಾರಣ ಇಲ್ಲಿನ ಕೈಗಾರಿಕೆ ಪ್ರದೇಶದ ಎಂ.ಕೆ. ಕೈಗಾರಿಕೆ, ಕೆಜಿಎನ್, ಎಂಬಿ, ಓಆರ್, 6ಎಚ್, ಲಿಮ್ರಾ, ಪಯೋನೀರ್ ಮತ್ತು ನ್ಯೂ ಹಿಮಾಲಯ ಘಟಕಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಮತ್ತು ಜಲ ಮೂಲಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹುಮನಾಬಾದ್ ಕೈಗಾರಿಕೆ ಪ್ರದೇಶಕ್ಕೆ ಬೆಂಗಳೂರಿನ ಕೇಂದ್ರ ಕಚೇರಿಯ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಸಾರ್ವಜನಿಕರು ಮತ್ತು ಜನಪ್ರತಿನಿಗಳೊಂದಿಗೆ ಸಮಾಲೋಚಿಸಿ ಕೆಲ ಕೈಗಾರಿಕೆ ಘಟಕ ಮುಚ್ಚಲು ಸೂಚನೆ ನೀಡಿದ್ದಲ್ಲದೆ, ಈ ಪ್ರದೇಶದ ಎಲ್ಲ ಉದ್ದಿಮೆದಾರರಿಗೆ ಪರಿಸರ ರಕ್ಷಣೆ ಮಾಡುವಂತೆ ಮನವಿ ಮಾಡಿರುವುದಾಗಿ ಖಂಡ್ರೆ ತಿಳಿಸಿದ್ದಾರೆ.
ಕೆಲ ಕಾರ್ಖಾನೆಗಳಿಂದ ಬೀದರ್ ಹೊರವಲಯದ ಕೊಳಾರ್ ಕೈಗಾರಿಕೆ ಪ್ರದೇಶದ ಮಣ್ಣು ಮತ್ತು ಅಂತರ್ಜಲ ಕಲುಷಿತವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕಳೆದ ಜೂ.2, 3 ಮತ್ತು 4ರಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಕೊಳಾರ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಮಾಲಿನ್ಯ ಉಂಟು ಮಾಡುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಖಂಡ್ರೆ ಹೇಳಿದ್ದಾರೆ.
ಕೈಗಾರಿಕೆಗಳು ಬಳಸಿದ ಆಯಿಲ್ ಮತ್ತೊಂದು ದೊಡ್ಡ ಸಮಸ್ಯೆ. ತ್ಯಾಜ್ಯ ತೈಲವನ್ನು ಕೆಲವರು ಗುಂಡಿ ತೋಡಿ ಭೂಮಿ ಒಡಲಿಗೆ ಹಾಕುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಿಯಂತ್ರಣ ಮಾಡದಿದ್ದಲ್ಲಿ ಅಧಿಕಾರಿಗಳೇ ಹೊಣೆ
ಮಾಲಿನ್ಯ ನಿಯಂತ್ರಣ ಮಾಡದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಕೆಲ ಸಕ್ಕರೆ ಸೇರಿ ಹಲವು ಕಾರ್ಖಾನೆಗಳು ವಿಷಕಾರಿ ತ್ಯಾಜ್ಯವನ್ನು ಕೊಳವೆ ಬಾವಿ, ನದಿ, ಕೆರೆ ಮತ್ತು ಹಳ್ಳಕ್ಕೆ ಹರಿಸುತ್ತಿರುವುದರಿಂದ ನೀರು ಮತ್ತು ಅಂತರ್ಜಲ ಕಲುಷಿತವಾಗುತ್ತಿದೆ. ಇಂಥ ಕೈಗಾರಿಕೆಗಳಿಂದ ಕುಡಿವ ನೀರು ಸಹ ವಿಷವಾಗುತ್ತಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿರ್ಲಕ್ಷಿಸಿದರೆ ಅವರನ್ನೇ ಹೊಣೆಗಾರರಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.