ಬೆಂಗಳೂರು: ಧಾರವಾಡ ಜಿಲ್ಲೆ ಹುಬ್ಬಳಿ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣದ ಸಂಬಂಧ 8 ಆರೋಪಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಧಾರವಾಡ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಗುರುವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಧಾರವಾಡ, ರಾಮನಗರ, ಮಂಡ್ಯ, ಕೊಡಗು ಮತ್ತು ಬೆಂಗಳೂರು ನಗರದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ 7 ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, ಒಬ್ಬ ಆರೋಪಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
2016ರ ಜೂ.15ರಂದು ಯೋಗೀಶ ಗೌಡ, ಧಾರವಾಡದ ಸಪ್ತಾಪುರದಲ್ಲಿ ಜಿಮ್ಲ್ಲಿ ಬೆಳಗಿನ ಜಾವ ವ್ಯಾಯಾಮ ಮಾಡುತ್ತಿದ್ದಾಗ ದುಷ್ಕರ್ವಿುಗಳು ಹತ್ಯೆ ಮಾಡಿದ್ದರು. ಆಸ್ತಿ ವಿವಾದಕ್ಕೆ ಹತ್ಯೆ ನಡೆದಿದೆ ಎಂದು ಧಾರವಾಡ ಉಪನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ 6 ಮಂದಿಯನ್ನು ಬಂಧಿಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಈ ನಡುವೆ ಯೋಗೀಶ ಗೌಡ ಕೊಲೆ ಹಿಂದೆ ರಾಜಕೀಯ ಕೈವಾಡದ ಆರೋಪ ಕೇಳಿಬಂದ ಕಾರಣ 2019ರ ಸೆ.6ರಂದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಸಿಬಿಐ ತನಿಖೆ ಕೈಗೊಂಡು 2019ರ ಸೆ.24ರಂದು ಧಾರವಾಡದ ಬಸವರಾಜು ಶಿವಪ್ಪ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹುಂಗಲ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು.
ತನಿಖೆ ವೇಳೆ 2016ರ ಜೂನ್ನಲ್ಲಿ ಆರೋಪಿ, 2 ಬಾರಿ ಧಾರವಾಡಕ್ಕೆ ಬಂದು ತನ್ನ ಸಹಚರರಿಗೆ ಸುಪಾರಿ ಕೊಟ್ಟು ಹೋಗಿದ್ದ. ಅದರಂತೆ ಯೋಗೀಶ ಹತ್ಯೆ ಮಾಡಿದ ಆರೋಪಿಗಳು ಜಿಲ್ಲೆಯಿಂದ ಪರಾರಿಯಾಗಿದ್ದರು. ಪ್ರಕರಣದ ತನಿಖೆ ವೇಳೆ ಆರೋಪಿಗಳ ಪಾತ್ರ ಮತ್ತು ಒಳ ಸಂಚು ರೂಪಿಸಿರುವ ಸಂಬಂಧ ದಿನಕ್ಕೊಂದು ರೋಚಕ ಸಂಗತಿ ಬೆಳಕಿಗೆ ಬರುತ್ತಿವೆ. ತನಿಖೆ ಮುಂದುವರಿದಿದ್ದು, ಸಾಕ್ಷ್ಯಗಳ ಸಂಗ್ರಹ ನಡೆಯುತ್ತಿವೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.