ಜಿಲ್ಲೆ

8 ಅಧಿಕಾರಿಗಳ ಮೇಲೆ ಪ್ರಕರಣ ದಾಖಲು:ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್

ಹಾಸನ: ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗವನ್ನು ಮೃತಪಟ್ಟ ವ್ಯಕ್ತಿಗೆ ಖಾತೆ ಮಾಡಿರುವ 8ಜನ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ದೂರಿದರು.
ಚನ್ನರಾಯಪಟ್ಟಣ ತಾಲೂಕಿನ ಗುಳ್ಳಹಳ್ಳಿ ಗ್ರಾಮದ ಸರ್ವೆ ನಂ. 15ರಲ್ಲಿನ 1 ಎಕರೆ 30 ಗುಂಟೆ ಗೋಮಾಳ ಜಾಗವನ್ನು ನಾಗಯ್ಯ ಎಂಬುವವರಿಗೆ ಅಕ್ರಮವಾಗಿ ಪಹಣಿ ದಾಖಲು ಮಾಡಿದ ಸಂಬಂಧ 2018ರ ಫೆ. 9ರಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ವರದಿ ಪಡೆದಿದ್ದ ನ್ಯಾಯಾಲಯ ತಪ್ಪಿತಸ್ಥರ ವಿರುದ್ಧ 2024ರ ಜು. 31ರಂದು ಎಫ್‌ಐಆರ್ ದಾಖಲಿಸಿದೆ. ಹಿಂದೆ ಹಾಸನ ಉಪವಿಭಾಗಾಧಿಕಾರಿಯಾಗಿದ್ದ ಡಾ.ಹೆಚ್.ಎಲ್.ನಾಗರಾಜ್, ಚನ್ನರಾಯಪಟ್ಟಣ ತಹಶೀಲ್ದಾರ್ ಆಗಿದ್ದ ಸೋಮಶೇಖರ, ಎಫ್‌ಡಿಎ ಸರಳಾ, ಪೂರ್ಣಿಮಾ, ಗ್ರಾಮ ಲೆಕ್ಕಾಧಿಕಾರಿ ಜಿ.ಕುಮಾರಸ್ವಾಮಿ, ಆರ್‌ಐ. ಬಿ.ಮೋಹನಕುಮಾರ, ಕೆ.ಪಿ.ರಮೇಶ್ ಹಾಗು ರೇಖಾ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಪ್ರಕರಣದಲ್ಲಿ ಭಾಗಿಯಾಗಿರುವ 8 ಜ ಅಧಿಕಾರಿಗಳನ್ನು ಇಲ್ಲಿವರೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಅಥವಾ ಬಂಧಿಸುವ ಯಾವ ಪ್ರಕ್ರಿಯೆ ನಡೆದಿಲ್ಲ. ಅಧಿಕಾರಿಗಳಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯ ಎಂಬ ಪರಿಸ್ಥಿತಿ ಜಾರಿಯಲ್ಲಿದೆ.
ಅಕ್ರಮದಲ್ಲಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿರುವುದನ್ನು ನ್ಯಾಯಾಲಯ ದೃಢಪಡಿಸಿದೆ. ಈ ವಿಚಾರ ಗಮನಕ್ಕೆ ಬಂದಾಗ ನಾನು ಆಗಿನ ಕಂದಾಯ ಸಚಿವರು, ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯಪಾಲರಿಗೆ ದೂರು ನೀಡಿದ್ದೆ. ನಂತರ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ನ್ಯಾಯ ದೊರೆತಿದೆ. ಪ್ರಕರಣ ಕೈಗೆತ್ತಿಕೊಂಡಾಗ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬಂದರೂ ಸರ್ಕಾರಿ ಜಾಗ ಉಳಿವಿಗಾಗಿ ಹೋರಾಟ ಮಾಡಿದ್ದೇನೆ. ಈಗ ಎಂಟು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಾಸ್ತವವಾಗಿ ನಾಗಯ್ಯ ಎಂಬ ವ್ಯಕ್ತಿ ನಿಧನ ಹೊಂದಿದ್ದು ಹತ್ತು ವರ್ಷ ಕಳೆದಿದೆ. ಅವರಿಗೆ ಹೆಸರಿಗೆ ಖಾತೆ ಮಾಡಿಸಿದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅಧಿಕಾರ ತಮ ಕೈಯಲ್ಲಿದೆ ಎಂಬ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿ ಅಧಿಕಾರಿಗಳಿದ್ದಾಗಿದೆ. ರಾಜ್ಯಾದ್ಯಂತ ಇಂತಹ ಪ್ರಕರಣಗಳು ಹೆಚ್ಚಿದ್ದು ಸಮಗ್ರ ತನಿಖೆ ಮೂಲಕ ಎಲ್ಲರಿಗೂ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಕಬ್ಬಳ್ಳಿ ಗ್ರಾಮದ ವೆಂಕಟೇಶ್ ಹಾಗು ಮಂಜೇಗೌಡ ಇದ್ದರು.