ಜಿಲ್ಲೆ

8 ತಿಂಗಳಿಂದ ಗ್ರಾಮ ಪಂಚಾಯ್ತಿ ಸಿಬ್ಬಂದಿಗಿಲ್ಲ ಸಂಬಳ: ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ

ರಾಮನಗರ: ತೆರಿಗೆ ವಸೂಲಾತಿಯ ಶೇ.40 ಹಣದಲ್ಲಿ ಪಂಚಾಯಿತಿ ಸಿಬ್ಬಂದಿಗಳ ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ಗ್ರಾಪಂ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮತ್ತು ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ. ಕಳೆದ ಕೆಲವು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಗ್ರಾಪಂ ತೆರಿಗೆ ಸಂಗ್ರಹದಲ್ಲಿ ಶೇ.40 ಹಣವನ್ನು ಸಿಬ್ಬಂದಿ ವೇತನಕ್ಕೆ ವಿನಿಯೋಗಿಸಬೇಕು ಎಂದು ಸರ್ಕಾರ ಆದೇಶಿಸಿದ್ದರೂ ಪಂಚಾಯಿತಿ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ.

ಈ ಬಗ್ಗೆ ಜಿಪಂ ಅಧಿಕಾರಿಗಳ ಗಮನಕ್ಕೆ ಎರಡೂ ಬಾರಿ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ 6,024 ಗ್ರಾಪಂಗಳಲ್ಲಿ 65 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ವೇತನಕ್ಕಾಗಿ ಬಾಕಿ ಇರುವ 382 ಕೋಟಿ ಹಣವನ್ನು ಬಜೆಟ್‌ನಲ್ಲಿ ಸೇರಿಸಬೇಕು. 14ನೇ ಹಣಕಾಸು ಯೋಜನೆ ಹಣದಲ್ಲಿ ಸರ್ಕಾರಿ ಆದೇಶದಂತೆ ಸಿಬ್ಬಂದಿಗೆ ವೇತನ ಕೊಡಬೇಕು, ಇಎಫ್‌ಎಂಎಸ್‌ಗೆ ಬಾಕಿ ಉಳಿದ ಪ್ರಕರಣಗಳನ್ನು ಸರ್ಕಾರಿ ಆದೇಶದಂತೆ ಸೇರ್ಪಡೆ ಮಾಡಬೇಕು, ಶೇ 10ರಷ್ಟು ಅನುದಾನವನ್ನು ಆಡಳಿತ ವೆಚ್ಚಕ್ಕೆ ಬಳಸಿಕೊಳ್ಳಬೇಕು ಎಂಬ ಆದೇಶವಿದೆ. ಆದರೂ ಇದು ಪಾಲನೆ ಆಗುತ್ತಿಲ್ಲ. ತಕ್ಷಣ ಈ ಬಗ್ಗೆ ಅಧಿಕಾರಿಗಳಿಗೆ ಜಿಪಂ ಸಿಇಒ ಸೂಕ್ತ ಆದೇಶ, ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ರೇಣುಕಯ್ಯ, ಎಂ.ನಾಗಮ್ಮ, ಜಯಶಂಕರ ಸ್ವಾಮಿ, ನಾರಾಯಣಪ್ಪ, ಕಮ್ರುದ್ದಿನ್ ಪಾಷಾ, ದೇವರಾಜು, ಸುರೇಶ್, ನಾಗರಾಜಯ್ಯ, ಪಾರ್ಥಸಾರಥಿ, ನಾಗರಾಜು, ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿಯಮ ಸಡಿಲಿಕೆಗೆ ಆಗ್ರಹ: ಜಿಲ್ಲೆಯಲ್ಲಿ ಬಹುತೇಕ ನೌಕರರಿಗೆ 10 ತಿಂಗಳ ವೇತನ ಬಾಕಿ ಉಳಿದಿದೆ. ಎಲ್ಲ ಪಂಚಾಯಿತಿಗಳಲ್ಲೂ ಇಂತಹ ಸಮಸ್ಯೆ ಇದೆ. ರಾಜ್ಯದ ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನಕ್ಕೆ 900 ಕೋಟಿ ರೂ. ಬೇಕು. ಆದರೆ ಸರ್ಕಾರ 518 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಕಳೆದ 2 ವರ್ಷಗಳಿಂದಲೂ ಸರಾಸರಿ ಒಬ್ಬ ನೌಕರನಿಗೆ ಕನಿಷ್ಠ 8 ತಿಂಗಳ ವೇತನ ಬಾಕಿ ಇದೆ. ಕೆಲವು ವರ್ಷಗಳ ಹಿಂದೆ ವಿದ್ಯಾರ್ಹತೆ ಇಲ್ಲ ಎಂದು ಜಿಲ್ಲೆಯಲ್ಲಿ 198 ನೌಕರರನ್ನು ವಜಾಗೊಳಿಸಲಾಗಿತ್ತು. ಕೂಡಲೇ ಈ ನಿಯಮ ಸಡಿಲಿಸಿ ಅವರನ್ನು ಮತ್ತೆ ನೌಕರಿಗೆ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮ ಪಂಚಾಯ್ತಿ ಕಾಯ್ದೆ ಸೆಕ್ಷನ್ 113ರಡಿ ಉಪ ಕಲಂ 1.2.3ರಲ್ಲಿ ಪಿಡಿಒ ಅವರೇ ಪಂಚಾಯಿತಿ ನೌಕರರ ಎಲ್ಲ ವಿಷಯಗಳನ್ನು ತೀರ್ಮಾನ ಮಾಡಲು ಅಧಿಕಾರ ಹೊಂದಿದ್ದಾರೆ. ಆದರೆ ಇವರೇ ಸರ್ಕಾರಿ ಆದೇಶಗಳನ್ನು ಪಾಲಿಸುತ್ತಿಲ್ಲ. -ಪ್ರದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗ್ರಾಪಂ ನೌಕರರ ಸಂಘ