ಸಾಂದರ್ಭಿಕ ಚಿತ್ರ 
ಜಿಲ್ಲೆ

ಸುರತ್ಕಲ್ ಅಕ್ರಮ ವಾಸವಿದ್ದ 8 ಮಂದಿ ಬಾಂಗ್ಲಾ ಪ್ರಜೆಗಳ ಪತ್ತೆ

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಬಳಿಯ ಮುಕ್ಕದಲ್ಲಿ ಕಟ್ಟಡ ಕಾಮಗಾರಿಗೆಂದು ಬಂದು ನೆಲೆ ಕಂಡುಕೊಂಡಿದ್ದ ಎಂಟು ಮಂದಿ ಬಾಂಗ್ಲಾದೇಶಿಗರನ್ನು ಸೆರೆ ಹಿಡಿಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮುಕ್ಕದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿಗೆ ಬಂದಿದ್ದ ಕಾರ್ಮಿಕರನ್ನು ಪರಿಶೀಲನೆಗೆ ಒಳಪಡಿಸಿದಾಗ ಬಾಂಗ್ಲಾ ಮೂಲದವರು ಅನ್ನುವುದು ಪತ್ತೆಯಾಗಿದೆ.
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿಕೊಂಡಿದ್ದಲ್ಲದೆ, ಸ್ಥಳೀಯ ಏಜಂಟರ ಮೂಲಕ ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಇವರನ್ನು ಅಜರುಲ್ ಇಸ್ಲಾಂ, ಮುಹಮ್ಮದ್ ರಕೀಬ್, ಜಾಹಿದ್ ಹುಸೇನ್, ಮಹಮ್ಮದ್ ಬಿಲಾಲ್ ಹುಸೇನ್, ಸೋಯೆಬ್ ಉಲ್ಟಾ, ಮಹಮ್ಮದ್ ಸಂಟುಲ್, ಮೌಕರ್ ಆಲಿ, ಅಜರುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು ಭಾರತದ ಗಡಿಭಾಗ ಬಾಂಗ್ಲಾದ ರಾಜಶಾಹಿ ಎಂಬಲ್ಲಿನ ನಿವಾಸಿಗಳು ಎಂದು ತಿಳಿದುಬಂದಿದೆ.
ಬಾಂಗ್ಲಾದಿಂದ ಭಾರತದ ಅಕ್ರಮವಾಗಿ ಗಡಿಯಿಂದ ನುಸುಳಿಕೊಂಡು ಪಶ್ಚಿಮ ಬಂಗಾಳದ ಮೂಲಕ ಕರ್ನಾಟಕಕ್ಕೆ ಕೂಲಿ ಕಾರ್ಮಿಕರಾಗಿ ಬಂದಿದ್ದು ಇಲ್ಲಿ ಸ್ಥಳೀಯ ಏಜಂಟರ ಮೂಲಕ ಆಧಾರ್ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ಇವರ ಬಗ್ಗೆ ವಿದೇಶಿಗರ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದ್ದು ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.