ಜಿಲ್ಲೆ

8, 9ರಂದು ಮೈನ್ಯೂಟ್ರಿಕಾನ್ ಸಮ್ಮೇಳನ

ಮೈಸೂರು: ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಿಂದ ಡಿ.8 ಮತ್ತು 9ರಂದು ಪೌಷ್ಟಿಕಾಂಶ ಕುರಿತು ರಾಜ್ಯ ಮಟ್ಟದ ಮೈನ್ಯೂಟ್ರಿಕಾನ್ ಸಮ್ಮೇಳನ ಆಯೋಜಿಸಲಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗ, ಪೌಷ್ಟಿಕಾಂಶ, ಆಹಾರಶಾಸ್ತ್ರ ವಿಭಾಗ, ಸ್ಕೂಲ್ ಆಫ್ ಲೈಫ್ ಸೈನ್ಸಸ್, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬನ್ನಿಮಂಪಟದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಶ್ರೀ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಲಿದ್ದಾರೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜೆಎಸ್‌ಎಸ್ ವಿವಿ ಕುಲಪತಿ ಡಾ.ಸುರೀಂದರ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜೀವನದ ವಿವಿಧ ಹಂತಗಳಲ್ಲಿ ಪೌಷ್ಟಿಕಾಂಶದ ಸಮಸ್ಯೆ, ಸಂಸ್ಕೃತಿ ಮತ್ತು ಪೋಷಣೆ, ಪೌಷ್ಟಿಕಾಂಶದ ಸಂಶೋಧನೆ, ಆಹಾರದ ಸುರಕ್ಷತೆ ಮತ್ತು ಭದ್ರತೆ ಮೊದಲಾದ ವಿಷಯ ಕುರಿತು ವೈಜ್ಞಾನಿಕ ಚರ್ಚೆಗಳು ನಡೆಯಲಿವೆ. ವೈದ್ಯರು, ಆಹಾರ ವಿಜ್ಞಾನ ಸಂಶೋಧಕರು ಸೇರಿದಂತೆ ತಜ್ಞರು ಪ್ರಬಂಧ ಮಂಡಿಸಲಿದ್ದಾರೆ. ಇದುವರೆಗೆ ಒಟ್ಟು 450 ಜನರು ನೋಂದಾಯಿಸಿಕೊಂಡಿದ್ದು, ಇನ್ನು ಆಗಮಿಸುವವವರು ಇದ್ದಾರೆ ಎಂದು ಹೇಳಿದರು.
ಡಾ. ಪ್ರವೀಣ್ ಕುಲಕರ್ಣಿ, ಡಾ.ಸತೀಶ್‌ಚಂದ್ರ, ಡಾ.ಸುನಿಲ್‌ಕುಮಾರ್ ಇದ್ದರು.