ಜಿಲ್ಲೆ

7ರಂದು ‘ಕಾವೇರಿ ವಿವಾದ ಒಂದು ಐತಿಹಾಸಿಕ ಇನ್ನೋಟ’ ಪುಸ್ತಕ ಬಿಡುಗಡೆ

ಹಾಸನ: ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರು ಬರೆದಿರುವ ‘ಕಾವೇರಿ ವಿವಾದ ಒಂದು ಐತಿಹಾಸಿಕ ಇನ್ನೋಟ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜು.7ರಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ ತಿಳಿಸಿದರು.
ಜಿಲ್ಲಾ ವಕೀಲರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಹಸಿರು ಭೂಮಿ ಪ್ರತಿಷ್ಠಾನದ ಸಹಯೋಗದಲ್ಲಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮವನ್ನು ಭಾನುವಾರ ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಎಚ್.ಪಿ. ಸ್ವರೂಪ್, ಎಚ್.ಕೆ. ಸುರೇಶ್ , ಸಿಮೆಂಟ್ ಮಂಜು, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ರೈತ ಮುಖಂಡ ಪ್ರೊ.ಕೆ.ಸಿ. ಬಸವರಾಜ್, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಕೃತಿಯ ಲೇಖಕರಾದ ಸಿ.ಚಂದ್ರಶೇಖರ್ ಅವರು ಉಪಸ್ಥಿತರಿರಲಿದ್ದಾರೆ ಎಂದರು.
ಇದರ ಜತೆಗೆ ಸಂವಾದ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ. ಕಾವೇರಿ ನ್ಯಾಯಮಂಡಳಿ ಹಾಗೂ ನ್ಯಾಯಾಲಯಗಳ ತೀರ್ಪಿನ ಅನುಷ್ಠಾನ ಮತ್ತು ಸಂಕಷ್ಟದ ಸಮಯದಲ್ಲಿ ನೀರಿನ ಹಂಚಿಕೆ ವಿಚಾರದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದಲ್ಲದೆ ದೇಶದ ನದಿಗಳು, ಕೆರೆ-ಕಟ್ಟೆಗಳು ಮತ್ತಿತರ ಜಲಮೂಲಗಳ ಮಾಲಿನ್ಯವಾಗುತ್ತಿರುವುದನ್ನು ತಡೆಗಟ್ಟುವ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ಪ್ರಸನ್ನ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣು ಕುಮಾರ್ , ಮಂಜುನಾಥ್ ಹಾಜರಿದ್ದರು.