ಜಿಲ್ಲೆ

7ನೇ ವೇತನ ಆಯೋಗ ಸಮಿತಿ ನೇಮಕಕ್ಕೆ ಮೀನಮೇಷ

ಮದ್ದೂರು: ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಸಮಿತಿ ನೇಮಕ ಹಾಗೂ ವರದಿ ಜಾರಿಗೆ ತರುವಲ್ಲಿ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ತಾಲೂಕು ಕ್ರೀಡಾಕೂಟದಲ್ಲಿ ಬುಧವಾರ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಬೆಳಗ್ಗೆ ಮಾಡುತ್ತೇನೆ, ಮಧ್ಯಾಹ್ನ ಹಾಗೂ ಸಂಜೆ ಜಾರಿ ಮಾಡುತ್ತೇನೆ ಎಂದು ಕೇವಲ ಭರವಸೆ ಭರವಸೆ ನೀಡುತ್ತಿದೆಯೇ ವಿನಃ ಜಾರಿಗೆ ತರದೆ ಇರುವುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.


ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಖಿತ ರೀತಿಯ ಉತ್ತರ ನೀಡುವ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸಮಾನ ವೇತನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆಧಾರದ ಮೇಲೆ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳುವ ಮೂಲಕ 7ನೇ ವೇತನ ಆಯೋಗ ಜಾರಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ಎಂದು ತಿಳಿಸಿದರು.


ಮೆಡಿಕಲ್ ಕಾಲೇಜುಗಳಿಗೆ ಆಲ್ ಇಂಡಿಯಾ ಕೌನ್ಸಿಲ್ ಪ್ರಕಾರ ವೇತನ ಸಿಗುತ್ತಿದೆ. ಡಿಪ್ಲೊಮಾ ಮತ್ತು ಇಂಜಿನಿಯರ್ ಕಾಲೇಜುಗಳ ಉಪನ್ಯಾಸಕರಿಗೆ ಎಎಸಿಟಿ ಸ್ಕೇಲ್ ಮತ್ತು ಪದವಿ ಉಪನ್ಯಾಸಕರಿಗೆ ಯುಜಿಸಿ ಸ್ಕೇಲ್ ವೇತನ ಸಿಗುತ್ತಿದೆ. ಆದರೆ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ವೇತನದಲ್ಲಿ ತಾರತಮ್ಯ ಉಂಟಾಗಿದೆ. ಈ ಸಂಬಂಧ ಹಲವಾರು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2006 ಏ.1ರ ನಂತರ ನೇಮಕವಾಗಿರುವ ಅನುದಾನಿತ ಕಾಲೇಜು, ಸರ್ಕಾರಿ ಕಾಲೇಜುಗಳ ಉಪನ್ಯಾಸಕರಿಗೆ ಹಾಗೂ ಸರ್ಕಾರಿ ನೌಕರಿಗೆ ಹೊಸದಾಗಿ ಜಾರಿಗೆ ತಂದಿರುವ ಪಿಂಚಣಿ ಯೋಜನೆ ರದ್ದು ಮಾಡಬೇಕು ಮತ್ತು ವಿಜಯಭಾಸ್ಕರ್ ಸಮಿತಿ ನೀಡಿರುವ ಸರ್ಕಾರಿ ನೌಕರರಿಗೆ ಪೂರಕವಾಗಿಲ್ಲದ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಮತ್ತು ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ರಾಜ್ಯ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಕೇಂದ್ರ ಮಾದರಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೂ ವೇತನ ನೀಡಬೇಕು ಎಂದು ಒತ್ತಾಯಿಸಿ ಸೆ.29 ರಂದು ಅಖಿಲ ಕರ್ನಾಟಕ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಬಹು ಮಹಡಿ ಕಟ್ಟಡದ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎದರು.