ಜಿಲ್ಲೆ

7ನೇ ಮಿತಿಮೀರಿ ಬಂದ ಜನರ ನಿಯಂತ್ರಣಕ್ಕೆ ಹರಸಾಹಸ

ಹಾಸನ:ತಿಂಡಿ, ಊಟ, ನೀರಿನ ವ್ಯವಸ್ಥೆ ಕೂಡ ಸರಿಯಾಗಿ ಸಿಗದೆ ಕಿ.ಮೀ. ಗಟ್ಟಲೇ ಉದ್ದದ ಸರತಿ ಸಾಲಿನಲ್ಲಿ ನಿಂತ ವಯೋವೃದ್ಧರು, ಹೆಂಗಸರು, ಮಕ್ಕಳ ಕಣ್ಣೀರು ಹಾಕಿಕೊಂಡು ತಳ್ಳಾಟ, ನೂಕಾಟದಲ್ಲಿಯೇ ಹಾಸನಾಂಬ ದೇವಿ ದರ್ಶನ ಪಡೆದ ಸನ್ನಿವೇಶ ಗುರುವಾರ ನಿರ್ಮಾಣವಾಯಿತು.

ಹಾಸನಂಬ ಜಾತ್ರಾ ಮಹೋತ್ಸವದ 7ನೇ ದಿನವಾದ ಗುರುವಾರ ಬೆಳಗಿನ ಜಾವದಿಂದಲೇ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದರೂ ದರ್ಶನ ಭಾಗ್ಯ ಸಿಗದೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಮಧ್ಯಾಹ್ನ ಜನರನ್ನು ನಿಯಂತ್ರಿಸಲಾಗದೆ ವಿಐಪಿ, ವಿವಿಐಪಿ ಮತ್ತು ಒಂದು ಸಾವಿರ ರೂ. ಪಾಸುಗಳನ್ನು ರದ್ದು ಮಾಡಲಾಯಿತು.

ಸರತಿ ಸಾಲಿನಲ್ಲಿ ನಿಂತಿದ್ದವರು ತಾಳ್ಮೆಯಿಂದ ಕಾಯುತ್ತಿದ್ದರು. ಆದರೆ ಮಧ್ಯಾಹ್ನ ಸುರಿದಂತಹ ಭಾರಿ ಮಳೆಗೆ ಜನರ ಆಕ್ರೋಶದ ಕಟ್ಟೆ ಒಡೆದು ಬ್ಯಾರಿಕೇಡ್ ತಳ್ಳಿ ಮಳೆಯಿಂದ ಬೇರೆಡೆ ಆಶ್ರಯ ಪಡೆಯಲು ಪರದಾಡಿದರು. ಆಗ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಭಕ್ತರ ನಡುವೆ ವಾಗ್ವಾದ ನಡೆಯಿತು.

ವಿವಿಐಪಿ ಮತ್ತು ವಿಐಪಿ ಪಾಸುಗಳನ್ನು ಪಡೆದುಕೊಂಡು ದರ್ಶನ ಪಡೆಯುತ್ತೇವೆ ಎಂದು ಬಂದವರು ಮಳೆಯಲ್ಲಿ ನೆನೆದುಕೊಂಡು ಪೊಲೀಸರ ಮುಂದೆ ಅಂಗಲಾಚಿ ನಮ್ಮನ್ನು ಸಾಲಿನಿಂದ ಬಿಟ್ಟುಬಿಡಿ ಎಂದು ಕೈ ಮುಗಿದು ವಿನಂತಿಸಿಕೊಳ್ಳುತ್ತಿದ್ದರು. ಇನ್ನು ಕೆಲವರು ಪೊಲೀಸರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಮಳೆಯ ನಡುವೆಯೂ ಕೂಡ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಎಲ್ಲ ವ್ಯವಸ್ಥೆಗಳು ಕೂಡ ಅವ್ಯವಸ್ಥೆಯಾಯಿತು. ಮಳೆಯಲ್ಲಿ ನೆಂದು ಮಕ್ಕಳು, ಮಹಿಳೆಯರು ಕಣ್ಣೀರು ಹಾಕುತ್ತಿದ್ದರು. ಉಳಿದಿರುವ ಇನ್ನು ಎರಡು ದಿನಗಳಾದರೂ ಜಿಲ್ಲಾಡಳಿತ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದರು.

ಸಾಲಿನಲ್ಲಿ ನಿಲ್ಲಲಾಗದವರು ದರ್ಶನ ಮಾಡದೆ ಹೊರಗಿನಿಂದಲೇ ದೇವಿಗೆ ಕೈಮುಗಿದು ವಾಪಸ್ ಆಗುತ್ತಿದ್ದರು. ನೂರಾರು ಕಿಲೋ ಮೀಟರ್‌ನಿಂದ ಬಂದು ದೇವಿಯ ದರ್ಶನವಾಗದೆ ಹಿಂದಿರುಗುತ್ತಿದ್ದು ಸರ್ವೇಸಾಮಾನ್ಯವಾಗಿತ್ತು. ಇದಲ್ಲದೆ ನಗರದಲ್ಲಿ ಹೆಚ್ಚಿನ ವಾಹನಗಳು ಮತ್ತು ಜನರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಂತೆಪೇಟೆಯಿಂದ ಎನ್‌ಆರ್ ವೃತ್ತದವರೆಗೂ ಗಂಟೆಗಟ್ಟಲೇ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಯಿತು. ಇದರಿಂದ ನಗರದಾದ್ಯಂತ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರಿತಪಿಸುವಂತಾಯಿತು.

ವಾರ್ ರೂಂನಿಂದ ಹೊರಗೆ ಬಾರದ ಡಿಸಿ

ಮಾಜಿ ಸಚಿವ, ಶಾಸಕ ಎಚ್.ಡಿ. ರೇವಣ್ಣ ಕುಟುಂಬದವರು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ದೇವಾಲಯ ಆವರಣದಲ್ಲಿ ನಿರ್ಮಿಸಿರುವ ವಾರ್ ರೂಮ್‌ನಲ್ಲಿ ಕುಳಿತಿದ್ದರೂ ಶಿಷ್ಟಾಚಾರದ ಪ್ರಕಾರ ಅವರನ್ನು ಆಹ್ವಾನಿಸಲು ಬರಲಿಲ್ಲ. ಅದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಆಗಮಿಸಿದರು ಕೂಡ ಅವರನ್ನು ಆಹ್ವಾನಿಸಲು ಜಿಲ್ಲಾಧಿಕಾರಿಗಳು ಬರಲಿಲ್ಲ. ರೇವಣ್ಣ ಮತ್ತು ಶಿವರಾಜ್ ತಂಗಡಗಿ ಅವರನ್ನು ಎಸಿ ಮಾರುತಿ ಮತ್ತು ತಹಸೀಲ್ದಾರ್ ಶ್ವೇತಾ ಅವರು ಸ್ವಾಗತ ಮಾಡಿದರು.

ಜಿಲ್ಲಾಡಳಿತದ ಗೌರವ ಸ್ವೀಕರಿಸದ ರೇವಣ್ಣ

ದೇವಸ್ಥಾನದ ದರ್ಶನಕ್ಕೆ ಬಂದಂತಹ ಗಣ್ಯರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಆದರೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಜಿಲ್ಲಾಡಳಿತದ ಸನ್ಮಾನವನ್ನು ಸ್ವೀಕರಿಸದೆ ತಿರಸ್ಕರಿಸಿ ಹೊರ ನಡೆದರು. ಜಿಲ್ಲಾಡಳಿತ ನಮ್ಮನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿ ಸನ್ಮಾನವನ್ನು ಸ್ವೀಕರಿಸದೆ ಬಹಿರಂಗವಾಗಿ ಆಕ್ರೋಶ ಹೊರಹಾಕಿ ದೇವಸ್ಥಾನದಿಂದ ಹೊರ ನಡೆದರು.

ಪೊಲೀಸರ ಆಕ್ರೋಶ

ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ತಮ್ಮ ಪಿಎ ಶಶಿ ಅವರನ್ನು ಪೊಲೀಸರು ತಡೆದು ತಳ್ಳಿದರು ಎಂಬ ಕಾರಣಕ್ಕಾಗಿ ಪೊಲೀಸರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ‘ನಾನು ಹಾಸನದ ಜಿಲ್ಲಾಧಿಕಾರಿ ನನ್ನ ದೇವಾಲಯದಲ್ಲಿ ನನ್ನ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದೀರಾ ನಿಮ್ಮನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಕೆಲಸದಿಂದ ತೆಗೆಸುತ್ತೇನೆ,’ ಎಂದು ಆವಾಜ್ ಹಾಕಿದ ಜಿಲ್ಲಾಧಿಕಾರಿ ಈಗ ಜನರು ಪೊಲೀಸರನ್ನು ಮತ್ತು ಬ್ಯಾರಿಕೇಡ್‌ಗಳನ್ನು ತಳ್ಳಿ ಪೊಲೀಸರಿಗೆ ಗಾಯ ಮಾಡಿ ಹೋಗಿದ್ದಾರೆ. ಈಗ ಜಿಲ್ಲಾಧಿಕಾರಿಗಳು ಎಲ್ಲಿ ಹೋಗಿದ್ದಾರೆ ಅವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಬಂದಿದ್ದೇವೆ. ಆದರೆ ಇಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತ ಮಾಡಿರುವಂತಹ ಅವ್ಯವಸ್ಥೆಯಿಂದ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತಿದೆ. ನಾವು ಜನರನ್ನು ನಿಯಂತ್ರಿಸಲಾಗದೆ ಅವರೊಂದಿಗೆ ವಾಗ್ವಾದಕ್ಕೆ ಇಳಿಯಬೇಕಾಗಿದೆ. ಮಳೆ ಬಿಸಿಲು ಎನ್ನದೆ ಕೆಲಸ ಮಾಡುತ್ತಿದ್ದೇವೆ. ಮಳೆ ಬಂದ ಸಂದರ್ಭದಲ್ಲಿ ಪೊಲೀಸರಿಗೆ ಗಾಯ ಮಾಡಿ ಹೋಗಿದ್ದಾರೆ. ಈಗ ನಮ್ಮ ಸಮಸ್ಯೆಯನ್ನು ಯಾರ ಹತ್ತಿರ ಹೇಳಿಕೊಳ್ಳೋಣ? ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆಯನ್ನು ಕೇಳುತ್ತಾರೆಯೇ ಎಂದು ಬಹಿರಂಗವಾಗಿಯೇ,’ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಕಂದಾಯ-ಪೊಲೀಸರ ನಡುವೆ ಮತ್ತೆ ಜಗಳ

ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾದ ದಿನದಿಂದಲೂ ಕೂಡ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಆದರೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳನ್ನು ವಹಿಸಿಕೊಂಡು ಮಾತನಾಡಿದ್ದಾರೆ. ಇದರಿಂದ ಪೊಲೀಸರ ಆಕ್ರೋಶದ ಕಟ್ಟೆ ಒಡೆದು ಇದೀಗ ಬಹಿರಂಗವಾಗಿ ಎರಡು ಇಲಾಖೆ ಅಧಿಕಾರಿಗಳು ದೇವಸ್ಥಾನದ ಆವರಣದಲ್ಲಿ ಜಗಳ ಮಾಡಿಕೊಂಡು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

ಬೆಂಗಳೂರಿನ ಭಕ್ತರ ಏಕಾಂಗಿ ಪ್ರತಿಭಟನೆ

ಬೆಂಗಳೂರಿನಿಂದ ದೇವಿ ದರ್ಶನಕ್ಕಾಗಿ ಬಂದಿದ್ದ ಚಂದ್ರಶೇಖರ್ (60) ಎಂಬುವವರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಆದರೆ ವಿವಿಐಪಿ ಪಾಸುಗಳನ್ನು ಬೇಕಾಬಿಟ್ಟಿ ಹಂಚಿ ವ್ಯವಸ್ಥೆಯನ್ನೇ ಹಾಳು ಮಾಡಿರುವುದರಿಂದ ರೋಸಿ ದೇಗುಲದ ರಾಜಗೋಪುರದ ಮುಂಭಾಗವೇ ಒಬ್ಬರೇ ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಬಂದು ಎಷ್ಟೇ ಮನವೊಲಿಸಿದರು ಪ್ರತಿಭಟನೆ ನಿಲ್ಲಿಸದೆ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಇದಕ್ಕೆ ಸ್ಪಷ್ಟನೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹಠ ಹಿಡಿದರು. ಕೊನೆಗೂ ಅವರ ಮನವೊಲಿಸಿ ಕಳುಹಿಸಲಾಯಿತು.

ಟಿಕೆಟ್‌ಗಳು, ಪಾಸ್‌ಗಳು ಬಂದ್

ಹಾಸನಾಂಬ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರ ಸಂಖ್ಯೆ ಮಿತಿಮೀರಿದ್ದು, ನಿಯಂತ್ರಣ ಅಸಾಧ್ಯ ಎನ್ನುವಷ್ಟು ಒತ್ತಡ ಏರ್ಪಟ್ಟ ಹಿನ್ನೆಲೆಯಲ್ಲಿ ವಿಶೇಷ ದರ್ಶನದ ಟಿಕೆಟ್, ವಿವಿಐಪಿ ಪಾಸ್ ವ್ಯವಸ್ಥೆ ರದ್ದುಗೊಳಿಸಲಾಗಿದೆ. ದೇವಾಲಯದ ಎಲ್ಲ ಟಿಕೆಟ್ ಸಾಲುಗಳು, ಧರ್ಮದರ್ಶನ, ಗಣ್ಯರ ಪಾಸುಗಳ ಸಾಲು ಕೂಡ ಕಿಲೋಮೀಟರ್‌ಗಟ್ಟಲೆ ಉದ್ದಕ್ಕೆ ಬೆಳೆದಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಮುಖ್ಯದ್ವಾರದ ಎದುರು ಜಮಾಯಿಸಿದ್ದಾರೆ.

ಪ್ರತಿಷ್ಠೆಗಾಗಿ ಜಿಲ್ಲೆಯ ಮಾನ ಹರಾಜು

ಹಾಸನಾಂಬ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತೇವೆ ಮತ್ತು ಅತ್ಯಧಿಕ ಆದಾಯವನ್ನು ಬರುವಂತೆ ಮಾಡುತ್ತೇವೆ. 20 ಲಕ್ಷ ಜನರು ಬರುವ ನಿರೀಕ್ಷೆ ಇದೆ ಎಂದು ಹೇಳಿಕೊಳ್ಳುತ್ತಿದ್ದ ಜಿಲ್ಲಾಧಿಕಾರಿಗಳು ಕಳೆದ ಒಂದು ವಾರದಿಂದ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಆಗುತ್ತಿರುವಂತಹ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವೈಫಲ್ಯವಾಗಿದೆ ಎಂದು ಹಾಸನದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಹಾಸನಂಬ ಜಾತ್ರಾ ಮಹೋತ್ಸವದಲ್ಲಿ ತಮ್ಮ ಪ್ರತಿಷ್ಠೆಗಾಗಿ ಜಿಲ್ಲೆಯ ಮಾನವನ್ನು ರಾಜ್ಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದಾರೆ. ಹೊರ ಜಿಲ್ಲೆಗಳಿಗೆ ಬೇಕಾಬಿಟ್ಟಿ ಪಾಸುಗಳನ್ನು ಹಂಚಿ ಉಚಿತವಾಗಿ ಬಸ್ ನಲ್ಲಿ ಬಂದು ಜಿಲ್ಲೆಯ ಬಗ್ಗೆ ಕೆಟ್ಟದಾಗಿ ಬಹಿರಂಗವಾಗಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಂತೆ ಮಾಡಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.