ಜಿಲ್ಲೆ

ದೇಶದಲ್ಲಿನ ಆಂತರಿಕ ಶತೃಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ : ಎಸ್. ಆರ್. ವಿಶ್ವನಾಥ್

ಬೆಂಗಳೂರು: ದೇಶದಲ್ಲಿ ಬಾಹ್ಯ ಶತೃಗಳಿಗಿಂತ ಪಿತೂರಿ, ಷಟ್ಯಂತ್ರ ನಡೆಸುವ ಆಂತರಿಕ ಶತೃಗಳ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಜಾಗೃತಿ ವಹಿಸುವ ಅಗತ್ಯವಿದೆ ಎಂದು ಶಾಸಕ ಎಸ್. ಆರ್. ವಿಶ್ವನಾಥ್ ಅಭಿಪ್ರಾಯಪಟ್ಟರು.

ಯಲಹಂಕ ತಾಲೂಕು ಆಡಳಿತದ ವತಿಯಿಂದ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬಾಹ್ಯ ಶತೃಗಳನ್ನು ಬಗ್ಗು ಬಡಿಯಲು ನಮ್ಮ ಸೇನೆ ಸಮರ್ಥವಾಗಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ನಮ್ಮ ಸೇನೆಯ ಸಾಮರ್ಥ್ಯ ಮತ್ತು ದೇಶದ ಮಿಲಿಟರಿ ತಂತ್ರಜ್ಞಾನದ ಶಕ್ತಿ ಏನು ಎಂಬುದಕ್ಕೆ ಕೈಗನ್ನಡಿಯಾಗಿದೆ. ಹಾಗಾಗಿಯೇ ಈ ಬಾರಿ ’ಆಪರೇಷನ್ ಸಿಂಧೂರ’ದ ಯಶಸ್ಸಿನ ವಿಜಯೋತ್ಸವದ ಸ್ಮರಣೆಗಾಗಿ ವೀರ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಆರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಇದೇ ವೇಳೆ ಪೌರ ಕಾರ್ಮಿಕರು, ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಮಾಜದ ಹಿತಕ್ಕಾಗಿ ಅಮೂಲ್ಯ ಕೊಡುಗೆ ನೀಡಿರುವ ಹಲವು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.

ಯಲಹಂಕ ತಾಲೂಕು ವ್ಯಾಪ್ತಿಯ ಹಲವು ಶಾಲೆಗಳ ಮಕ್ಕಳಿಂದ ದೇಶಭಕ್ತಿ ಸಾರುವ ಗೀತೆಗಳಿಗೆ ನೃತ್ಯ ಪ್ರದರ್ಶನ, ಪೊಲೀಸ್ ಇಲಾಖೆ ಮತ್ತು ಎನ್.ಸಿ.ಸಿ. ವಿದ್ಯಾರ್ಥಿ ಗಳಿಂದ ಆಕರ್ಷಕ ಪಥ ಸಂಚಲನ, ಧ್ವಜವಂದನೆ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಶಾಲಾ ವಿದ್ಯಾರ್ಥಿಗಳು ವಿಶೇಷವಾಗಿ ‘ಆಪರೇಷನ್ ಸಿಂಧೂರ’ದ ನೃತ್ಯ ರೂಪಕ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಯಲಹಂಕ ತಹಶಿಲ್ದಾರ್ ಶ್ರೇಯಸ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಶೈಲಾ , ತಾ.ಪಂ.ಕಾರ್ಯ ನಿರ್ವಾಹಣಾ ಅಧಿಕಾರಿಗಳಾದ ಎಲ್. ಮಧು, ಜೋಸೆಫ್, ಉಪ ತಹಶಿಲ್ದಾರ್ ಬಿ.ಎ. ಶ್ರೀನಿವಾಸ್, ಬಿ.ಆರ್.ಸಿ. ಪ್ರಕಾಶ್, ರಾಜಸ್ವ ನಿರೀಕ್ಷಕ ಎಲ್. ಉಷಾ, ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.