ಯಳಂದೂರು: ತಾಲೂಕು ಸರ್ಕಾರಿ ಆಸ್ಪತ್ರೆ ವತಿಯಿಂದ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ 948ರ ಬದಿಯಲ್ಲಿ 79 ಗಿಡಗಳನ್ನು ನೆಡುವ ಮೂಲಕ ಸ್ವಾತಂತ್ರೃ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್ ಧ್ವಜಾರೋಹಣ ನೆರವೇರಿಸಿದ ನಂತರ ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ದೇಶದ ಸ್ವಾತಂತ್ರೃ ತಂದುಕೊಟ್ಟವರ ಸ್ಮರಣೆ ಅತ್ಯಗತ್ಯ. ದೇಶವು ಬ್ರಿಟಿಷರ ಆಡಳಿತದಿಂದ ಮುಕ್ತವಾಗಲು ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಎಲ್ಲ ವೀರರನ್ನು ನೆನಪಿಟ್ಟುಕೊಳ್ಳಲು ಮತ್ತು ಅವರಿಗೆ ಗೌರವ ಸಲ್ಲಿಸಲು ಒಂದು ಸಂದರ್ಭವಾಗಿದೆ. ಜತೆಗೆ ಭಾರತ ದೇಶವು ವೈವಿಧ್ಯತೆ ಮತ್ತು ಏಕತೆಯ ಸಂಕೇತವಾಗಿದೆ. ಈ ದಿನ ನಾವು ನಮ್ಮ ದೇಶದ ಅಭಿವೃದ್ಧಿಗೆ ಬದ್ಧರಾಗಿ ಎಲ್ಲರೂ ಸಮಾನವಾಗಿ ಬದುಕುವ ಸಮಾಜವನ್ನು ನಿರ್ಮಿಸಲು ಶ್ರಮಿಸಬೇಕು. ಜತೆಗೆ ಪ್ರತಿಯೊಬ್ಬರೂ ಪರಿಸರ ಪ್ರೇಮ ಬೆಳೆಸಿಕೊಂಡು ಗಿಡ-ಮರ, ಕಾಡು ಸಂರಕ್ಷಣೆ ಮಾಡುವುದರ ಜತೆಗೆ ಅದರ ಪೋಷಣೆಯನ್ನು ಕಡ್ಡಾಯವಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿ, ಎಲ್ಲರೂ ತಮ್ಮ ತಂದೆ, ತಾಯಿ, ಮಕ್ಕಳು ಸೇರಿದಂತೆ ಕುಟುಂಬದವರ ಹೆಸರಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಪರಿಸರ ಪ್ರೇಮ ಜತೆಗೆ ಕುಟುಂಬದ ವರ್ಗದವರ ಹೆಸರು ಉಳಿಸಿ ಬೆಳೆಸುವ ಮೂಲಕ ಪರಿಸರಕ್ಕೆ ಪೂರಕವಾಗಲಿದೆ ಎಂದು ಸಲಹೆ ನೀಡಿದರು.