ಬೆಂಗಳೂರು: ನಾವೆಲ್ಲರೂ ಒಂದೇ... ಜಾತಿ ಒಂದೇ...ಕುಲ ಒಂದೇ... ನಾವು ಮನುಜರು ಎಂಬ ಸಂದೇಶ ಸಾರುತ್ತ ನಗರದಲ್ಲಿ ಗುರುವಾರ ಧ್ವಜಾರೋಹಣದೊಂದಿಗೆ 78ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಶಕ್ತಿ ಕೇಂದ್ರ ವಿಧಾನ ಸೌಧ,ರಾಜಭವನ, ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ರಾಜಕೀಯ ಪಕ್ಷಗಳ ಕಚೇರಿಗಳು, ಆರೋಗ್ಯ ಸೌಧ, ಬ್ಯಾಂಕುಗಳು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಸಂಘ ಸಂಸ್ಥೆಗಳು ಸೇರಿ ನಗರದ ಪ್ರತಿ ಬಡಾವಣೆಗಳಲ್ಲಿ ಹಾಗೂ ವಾಹನಗಳಲ್ಲಿ ರಾಷ್ಟ್ರಧಜ್ವ ಹಾರಾಡಿದವು, ರಾಷ್ಟ್ರಗೀತೆ ಹಾಗೂ ದೇಶ ಭಕ್ತಿಗೀತೆಗಳು ಮೊಳಗಿದವು.
ಶಾಲಾ ಕಾಲೇಜುಗಳಲ್ಲಿ ನಡೆದ ಸ್ವಾತಂತ್ರ್ಯ ದಿನದ ಸಂಭ್ರಮೋತ್ಸವದಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವಿಶೇಷ ಭೂಷಣ ತೊಟ್ಟು ಫ್ಯಾಷನ್ ಶೋ, ಏಕಪಾತ್ರಾಭಿನಯ, ನಾಟಕಗಳ ಪ್ರದರ್ಶನ ನೀಡಿದರು. ವಿವಿಧ ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಸಂಜೆಯಾಗುತ್ತಲೇ ವಿಧಾನಸೌಧ, ಆರೋಗ್ಯ ಸೌಧ, ಹೈಕೋರ್ಟ್, ಆಸ್ಪತ್ರೆಗಳು ಸೇರಿ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜದ ಸಂಕೇತವಾಗಿ ಕೇಸರಿ, ಬಳಿ, ಹಸಿರು ದೀಪಗಳು ಬೆಳಗಿದವು. ಮಕ್ಕಳು, ಯುವಕು ಸೇರಿ ಸಾವಿರಾರು ಮಂದಿ ಮುಖದ ಮೇಲೆ ರಾಷ್ಟ್ರಧ್ವಜದ ಚಿತ್ರ ಬಿಡಿಸಿಕೊಂಡು ದೇಶಭಕ್ತಿ ಮೆರೆದರು.