ಜಿಲ್ಲೆ

78 ಗ್ರಾಮಗಳಲ್ಲಿ ಎದುರಾಗಲಿದೆ ನೀರಿನ ಕೊರತೆ

ವಿಕ್ರಮ ನಾಡಿಗೇರ ಧಾರವಾಡ ಹಿಂದಿನ ವರ್ಷದ ಬೇಸಿಗೆಯಲ್ಲಿ ಉಲ್ಬಣಿಸಿದ ಬರಗಾಲದಿಂದ ಜನರು ಮಾತ್ರವಲ್ಲದೆ, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಪ್ರಸಕ್ತ ಸಾಲಿನಲ್ಲಿ ತಾಪಮಾನ ದಿನೇ ದಿನೇ ಏರುತ್ತಿದ್ದರೂ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ 78 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದರು. ಇದರಿಂದ ಈಗಾಗಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಿಂದಿನ ವರ್ಷದ ಅನುಭವದ ಆಧಾರದಲ್ಲಿ ಸರ್ವೇ ನಡೆಸಿ 78 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಊಹಿಸಿದ್ದು, ಆ ಸಮಸ್ಯೆ ಎದುರಿಸಲು ಸಿದ್ಧತೆ ಸಹ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಉಂಟಾಗಿದ್ದ ನೀರಿನ ಸಮಸ್ಯೆ ಆಧರಿಸಿ ಜಿಲ್ಲೆಯ 395 ಗ್ರಾಮಗಳ ಪೈಕಿ 78 ಗ್ರಾಮಗಳನ್ನು ಜಿಲ್ಲಾಡಳಿತವೇ ಗುರುತಿಸಿದೆ. ಈ 78 ಗ್ರಾಮಗಳ ಪೈಕಿ 29 ಗ್ರಾಮಗಳಲ್ಲಿ ಮಾರ್ಚ್​, 26 ಗ್ರಾಮಗಳಲ್ಲಿ ಏಪ್ರಿಲ್​ ಹಾಗೂ 23 ಗ್ರಾಮಗಳಲ್ಲಿ ಮೇ ತಿಂಗಳಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಅಂದಾಜಿಸಿದೆ. ಇಲ್ಲಿ ಕುಡಿಯುವ ನೀರು ಸರಬರಾಜಿಗೆ ಕೊಳವೆಬಾವಿ ಸಹ ಗುರುತಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 162 ಖಾಸಗಿ ಕೊಳವೆಬಾವಿ ಮಾಲೀಕರಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕಲಘಟಗಿಯ 40 ಕೊಳವೆಬಾವಿ ಮಾಲೀಕರು ಒಪ್ಪಂದಕ್ಕೆ ಸಮ್ಮತಿಸಿದ್ದಾರೆ. ಮಲಪ್ರಭಾ ಕಾಲುವೆ ಮೂಲಕ ನವಲಗುಂದ ತಾಲೂಕಿನ 37 ಕೆರೆಗಳು, ಅಣ್ಣಿಗೇರಿಯ 13 ಕೆರೆಗಳು, ಹುಬ್ಬಳ್ಳಿಯ 7 ಕೆರೆಗಳು ಮತ್ತು ಕುಂದಗೋಳ ತಾಲೂಕಿನ 3 ಕೆರೆಗಳು ಸೇರಿ ಒಟ್ಟು 60 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದೆ. ಇವುಗಳಲ್ಲಿ ಏಪ್ರಿಲ್​ನಲ್ಲಿ 10 ಹಾಗೂ ಮೇನಲ್ಲಿ 50 ಕೆರೆಗಳು ಬಳಕೆ ಆಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲದೆ ಹು-ಧಾ ಅವಳಿನಗರದಲ್ಲಿ ಮಾರ್ಚ್​ ಆರಂಭದಲ್ಲಿ ಪೈಪ್​ಲೈನ್​ ಕಾಮಗಾರಿಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕಾಮಗಾರಿ ಸರಿಯಾದ ಬಳಿಕ ಪೂರೈಕೆ ಸರಿಯಾಗಿದೆ. ಹೀಗಾಗಿ ಸದ್ಯಕ್ಕೆ ಅವಳಿನಗರದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿಲ್ಲ. ಮುಂದಿನ ದಿನಗಳಲ್ಲಿ ಒಂದು ವೇಳೆ ನಗರದಲ್ಲಿ ನೀರಿನ ಅಭಾವ ಉಂಟಾದರೆ ಏನೆಲ್ಲ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕಿದೆ. *ಸಮಸ್ಯೆ ಎದುರಾಗಲಿರುವ ಗ್ರಾಮಗಳು: ಧಾರವಾಡ ತಾಲೂಕಿನ ಮುಗದ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ವೀರಾಪುರ, ಕಲ್ಲಾಪುರ, ರಾಮಾಪುರ, ನಿಗದಿ, ಬೆಣಕನಕಟ್ಟಿ, ದೇವರಹುಬ್ಬಳ್ಳಿ, ದೇವಗಿರಿ, ಕ್ಯಾರಕೊಪ್ಪ, ಬೇಲೂರ, ಬಾಡ, ಹೊಸಟ್ಟಿ, ಮಾದನಭಾವಿ, ಮಂಡಿಹಾಳ, ಮುಮ್ಮಿಗಟ್ಟಿ, ತಾಂಡಾ, ವರವ ನಾಗಲಾವಿ, ಹಳೇತೇಗೂರ, ಶಿಂಗನಹಳ್ಳಿ, ಲಕಮಾಪುರ, ಮಂಗಳಗಟ್ಟಿ, ಬೇಗೂರ, ಬೆಳ್ಳಿಗಟ್ಟಿ, ನಾಯಕನಹುಲಿಕಟ್ಟಿ, ಕಣವಿಹೊನ್ನಾಪುರ, ಗುಳೇದಕೊಪ್ಪ, ದಡ್ಡಿಕಮಲಾಪರ, ಕಲ್ಲೂರ, ಮುಳಮುತ್ತಲ, ಅಳ್ನಾವರ ತಾಲೂಕಿನ ಬೆಣಚಿ, ಅಂಬೊಳ್ಳಿ, ಅರವಟಗಿ, ಕುಂಬಾರಕೊಪ್ಪ, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅಗಡಿ, ಪಾಲಿಕೊಪ್ಪ, ಪರಸಾಪುರ, ರಾಯನಾಳ, ಅಂಚಟಗೇರಿ, ಚನ್ನಪುರ, ಛಬ್ಬಿ, ಅರಳಿಕಟ್ಟಿ, ಮಂಟೂರ, ಉಮಚಗಿ, ನಾಗರಳ್ಳಿ, ಶಿರಗುಪ್ಪಿ, ಬಂಡಿವಾಡ, ಮಲ್ಲಿಗವಾಡ, ನೂಲ್ವಿ, ಇನಾಮವೀರಪುರ, ಕರಡಿಕೊಪ್ಪ, ವರೂರ, ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ, ನೆಲ್ಲಿಹರವಿ ತಾಂಡಾ, ತಬಕದಹೊನ್ನಳ್ಳಿ, ಕಾಮಧೇನು, ಮಿಶ್ರಿಕೋಟಿ, ಚಳಮಟ್ಟಿ, ಜಿನ್ನೂರ, ಧೂಳಿಕೊಪ್ಪ, ಸೂಳಿಕಟ್ಟಿ, ಕಲಕುಂಡಿ, ಬೋಗೆನಾಗರಕೊಪ್ಪ, ಬೆಂಡಲಗಟ್ಟಿ, ಲಿಂಗನಕೊಪ್ಪ, ದೇವಿಕೊಪ್ಪ, ತಾವರಗೇರಿ, ಕಂದ್ಲಿ, ಕುಂದಗೋಳ ತಾಲೂಕಿನ ಹಿರೇಗುಂಜಾಳ, ಯಲಿವಾಳ, ಗುಡಗೇರಿ, ಶಿರೂರ, ರಾಮನಕೊಪ್ಪ, ಹುಣಸಿ, ಬೆಳ್ಳಿಗಟ್ಟಿ, ಇನಾಮಕೊಪ್ಪ, ತೀರ್ಥ.

ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಈವರೆಗೂ ಟ್ಯಾಂಕರ್​ ಮೂಲಕ ನೀರು ಪೂರೈಸುತ್ತಿಲ್ಲ. ನೀರಿನ ಸಮಸ್ಯೆ ಎದುರಾಗಲಿರುವ 78 ಗ್ರಾಮಗಳಲ್ಲಿ ಅಗತ್ಯಬಿದ್ದಾಗ ತಕ್ಷಣ ಕುಡಿಯುವ ನೀರು ಸರಬರಾಜಿಗೆ 162 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. * ದಿವ್ಯ ಪ್ರಭು, ಜಿಲ್ಲಾಧಿಕಾರಿ