ಜಿಲ್ಲೆ

774 ಎಕರೆ ಜಮೀನಿನ ದಾಖಲೆಯಲ್ಲಿ ವಕ್ಫ್ ಹೆಸರು

ನರಗುಂದ: ಶಾಂತಿ ಸಾಮರಸ್ಯದ ನಾಡಾಗಿರುವ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ನಾಡಿನ ಜನತೆಯನ್ನು, ರೈತರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ದೂರಿದರು.

ವಕ್ಫ್ ಕಾಯಿದೆ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ವಕ್ಫ್ ಕಾಯಿದೆಗೆ ತಿದ್ದಪಡಿ ತರುವ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಆದರೆ, ಅದಿನ್ನೂ ಜಂಟಿ ಸಂಸದೀಯ ಮಂಡಳಿಯ ಪರಿಶೀಲನೆಯಲ್ಲಿದೆ. ಈ ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕ ತೋರುತ್ತಿದೆ. ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ಸಚಿವ ಜಮೀರ ಅಹ್ಮದ್ ನೇರವಾಗಿ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಆರೋಪಿಸಿದರು.

ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ನರಗುಂದ ತಾಲೂಕಿನ 200 ರೈತರ ಸುಮಾರು 774 ಎಕರೆ ಜಮೀನು ವಕ್ಫ್‌ಗೆ ಸೇರಿದ್ದೆಂದು ಉತಾರದಲ್ಲಿ ದಾಖಲಾಗಿದೆ. ನರಗುಂದ ತಾಲೂಕಿನ ಹೊಳೆಆಲೂರದಲ್ಲಿ 200 ರೈತರ ಜಮೀನು ಖಾತೆಯಲ್ಲಿ ವಕ್ಫ್ ಎಂದು ನಮೋದು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ಬದಲು ಜನರನ್ನು ತೊಂದರೆಗೆ ಸಿಲುಕಿಸುತ್ತಿದೆ ಎಂದರು.

ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ವಾಸು ಜೋಗಣ್ಣವರ, ಎಸ್.ಆರ್. ಪಾಟೀಲ, ಲಿಂಗರಾಜ ಪಾಟೀಲ, ಮುತ್ತಣ್ಣ ಜಂಗಣ್ಣವರ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶ್ರೀಶೈಲ ತಳವಾರ ಮೂಲಕ ಡಿ.ಸಿ.ಗೆ ಮನವಿ ಸಲ್ಲಿಸಲಾಯಿತು. ಎಂ.ಎಚ್. ತಿಮ್ಮನಗೌಡ್ರ, ಆರ್.ಬಿ. ಅಳಗವಾಡಿ, ಬಿ.ಬಿ. ಐನಾಪೂರ, ಎ.ಎಂ. ಹುಡೇದ, ಭೀಮ್ಮಪ್ಪ ಯಾವಗಲ್, ಮುತ್ತು ರಾಯರಡ್ಡಿ, ಶಿವಾನಂದ ಮುತವಾಡ, ಸಿದ್ದಪ್ಪ ಯಲಿಗಾರ, ಬಸವರಾಜ ಮಳಗಿ, ಸಂಗನಗೌಡ ಹಾಲಗೌಡ್ರ, ರಾಜುಗೌಡ ಪಾಟೀಲ, ನಾಗರಾಜ ನೆಗಳೂರ, ವಿಠಲ ಹವಾಲ್ದಾರ, ಹನುಮಂತ ಹವಾಲ್ದಾರ, ನವೀನಗೌಡ ಪಾಟೀಲ, ಅಜ್ಜುಗೌಡ ಪಾಟೀಲ, ಕಿರಣ ಮುಧೋಳೆ, ಸಿದ್ದೇಶ ಹೂಗಾರ, ಎಸ್.ಬಿ. ಕರಿಗೌಡ್ರ, ಬಸವರಾಜ ಹುಲಕುಂದ, ಪ್ರಕಾಶ ಹಾದಿಮನಿ ಇತರರು ಇದ್ದರು.