ಮಾನ್ವಿ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಅಮೃತ್-2.0 ಯೋಜನೆ ಕಾಮಗಾರಿಗೆ ಸಚಿವ ಎನ್.ಎಸ್.ಬೋಸರಾಜು ಭೂಮಿಪೂಜೆ ನೆರವೇರಿಸಿದರು. ಶಾಸಕ ಹಂಪಯ್ಯನಾಯಕ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್,ಪುರಸಭೆ ಸದಸ್ಯರಾದ ರೇವಣ್ಣ ಸಿದ್ದಯ್ಯಸ್ವಾಮಿ, ಬಾಷಾಸಾಬ್ ಇತರರಿದ್ದರು. 
ಜಿಲ್ಲೆ

7,554 ಮನೆಗಳಿಗೆ ಕುಡಿವ ನೀರು ಪೂರೈಸುವ ಗುರಿ - ಸಚಿವ ಎನ್.ಎಸ್.ಬೋಸರಾಜು ಭರವಸೆ

ಮಾನ್ವಿ: ಪಟ್ಟಣದ ಜನತೆಗೆ ಶಾಶ್ವತ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 60 ಕೋಟಿ ರೂ. ವೆಚ್ಚದಲ್ಲಿ ಅಮೃತ-2.0 ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಭಾನುವಾರ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಪಟ್ಟಣಕ್ಕೆ ಕುಡಿವ ನೀರಿನ ವಿತರಣಾ ಕೊಳವೆ ಮಾರ್ಗ ಅಳವಡಿಸುವುದು ಹಾಗೂ ಗೃಹ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಾತರಕಿ ಗ್ರಾಮದ ತುಂಗಭದ್ರಾ ನದಿ ಹತ್ತಿರ ಇನ್‌ಟೇಕ್ ವೆಲ್ ನಿರ್ಮಿಸಿ ಕೊಳವೆಗಳನ್ನು ಅಳವಡಿಸಿ, ಜಾಕ್‌ವೆಲ್‌ನ ಈಗಿರುವ ವಿದ್ಯುತ್ ಪಂಪ್‌ಸೆಟ್‌ಗಳನ್ನು 180 ಎಚ್.ಪಿ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು. ಪಟ್ಟಣದಲ್ಲಿ 7.50 ಲಕ್ಷ ಹಾಗೂ 12.50 ಲಕ್ಷ ಲೀ. ಸಾಮರ್ಥ್ಯದ ಜಲ ಸಂಗ್ರಹಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಅಮೃತ -2.0 ಯೋಜನೆಯಡಿ ತುಂಗಭದ್ರಾ ನದಿಯಿಂದ ನೀರು ದೊರೆಯುವುದರಿಂದ ಮಾನ್ವಿ ಪಟ್ಟಣದ 7,554 ಮನೆಗಳಿಗೆ ಕುಡಿವ ನೀರನ್ನು ಪೂರೈಸುವ ಗುರಿ ಇದೆ ಎಂದು ತಿಳಿಸಿದರು.

7 ವರ್ಷದ ಹಿಂದೆ ಹಂಪಯ್ಯ ನಾಯಕ ಶಾಸಕರಾಗಿದ್ದಾಗ 6 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ಪ್ರಾರಂಭಿಸಲಾಯಿತು. ಆದರೆ, ನಾಲ್ಕು ವರ್ಷಗಳಿಂದ ಟ್ಯಾಂಕ್ ಕಾಮಗಾರಿ ಪೂರ್ಣಗೊಳ್ಳಲು ಬಿಡದಿದ್ದರಿಂದ ಈ ಭಾಗದ ನಾಲ್ಕು ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಬಿಡಲು ಸಾಧ್ಯವಾಗಲಿಲ್ಲ. ಈಗ ಕಾಮಗಾರಿ ಪೂರ್ಣಗೊಳಿಸಿ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಹೇಳಿದರು.

ಶಾಸಕ ಹಂಪಯ್ಯನಾಯಕ ಮಾತನಾಡಿ, 18 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಚೌಹಾಣ್, ಎಇ ಧನುಶ್ರೀ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರಸಾಬ್, ಪ್ರಮುಖರಾದ ವೀರೇಶ.ಡಿ, ಬಿ.ಕೆ.ಅಮರೇಶಪ್ಪ, ರುದ್ರಪ್ಪ ಅಂಗಡಿ, ಸೈಯದ್ ಖಾಲಿದ್ ಖಾದ್ರಿ, ಮಹಾಂತೇಶಸ್ವಾಮಿ ರೌಡೂರು, ವೀರೇಶ, ರಾಜಾ ಸುಭಾಸ್‌ಚಂದ್ರ ನಾಯಕ, ನಾಗರಾಜ, ಇತರರಿದ್ದರು.