ಬೀದರ್: ಬಸವ ವಸತಿ ಯೋಜನೆ ಅಡಿಯಲ್ಲಿ ಬೀದರ್ ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 12 ಗ್ರಾಮ ಪಂಚಾಯಿತಿಗಳ ಸೂರಿಲ್ಲದ ಬಡವರಿಗಾಗಿ ಒಟ್ಟು 7552 ಮನೆಗಳನ್ನು ಮಂಜೂರಿ ಮಾಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಬೇಡಿಕೆ ಮಂಡಿಸಿದ್ದಾರೆ.
ಬೆಂಗಳೂರಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿದ ಅವರು, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಲವರು ತೀರ ಬಡವರಿದ್ದಾರೆ. ಅನೇಕರಿಗೆ ವಾಸಿಸಲು ಮನೆಯಿಲ್ಲ. ಹೀಗಾಗಿ ಇವರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರಿ ಮಾಡಿ ಆಶ್ರಯ ಒದಗಿಸಬೇಕು ಎಂದು ಗಮನ ಸೆಳೆದಿದ್ದಾರೆ.
ಮರಖಲ್ ಗ್ರಾಮ ಪಂಚಾಯಿತಿ 735, ಗಾದಗಿ 683, ಜನವಾಡಾ 700, ಚಾಂಬೋಳ 500, ಶ್ರೀಮಂಡಲ್ 600, ಚಿಮಕೋಡ 510, ಚಿಲ್ಲರ್ಗಿ 560, ಅಷ್ಟೂರ್ 720, ಅಲಿಯಂಬರ್ 774, ಯರನಳ್ಳಿ 570, ಅಲಿಯಾಬಾದ್ 400 ಹಾಗೂ ಮಾಳೆಗಾಂವ್ ಗ್ರಾಮ ಪಂಚಾಯಿತಿಯ 810 ಫಲಾನುಭವಿಗಳಿಗೆ ಮನೆಗಳನ್ನು ಮಂಜೂರಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಕ್ಷೇತ್ರದ ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಿಂದ ಕಲೆ ಹಾಕಿದ ಮಾಹಿತಿ ಆಧಾರದ ಮೇಲೆ ಅರ್ಹ ಬಡ ಫಲಾನುಭವಿಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಗಿದೆ. ಆದ್ಯತೆ ಮೇಲೆ ಇವರಿಗೆಲ್ಲ ಸೂರು ಕಲ್ಪಿಸುವಂತೆ ಕೋರಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸೂರ್ಯಕಾಂತ ತಿಳಿಸಿದ್ದಾರೆ.