ಜಿಲ್ಲೆ

7,50 ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ; ಶಾಸಕ ಎಚ್.ಸಿ.ಬಾಲಕೃಷ್ಣ ಭರವಸೆ

ಮಾಗಡಿ : ಪಟ್ಟಣದಲ್ಲಿ 7.50 ಕೋಟಿ ರೂಪಾಯಿ ವೆಚ್ಚದಲ್ಲಿ ಗುರು ಭವನ ನಿರ್ಮಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಸರಸ್ವತಿ ಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಸಂಘದಿಂದ 2.50 ಕೋಟಿ ರೂ. ಹಾಗೂ ಶಾಸಕರ ಅನುದಾನದಿಂದ 5 ಕೋಟಿ ರೂ. ಸೇರಿ ಒಟ್ಟು 7.50 ಕೋಟಿ ರೂ. ವೆಚ್ಚದಲ್ಲಿ ಸುಂದರವಾದ ಗುರುಭವನ ನಿರ್ಮಿಸಲು ಇನ್ನೆರಡು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದರು.

ಸರ್ಕಾರಿ ನೌಕರರಿಗೆ ಕ್ರೀಡೆ ಅತ್ಯವಶ್ಯಕ, ದೇಹವನ್ನು ಸದೃಢವಾಗಿಟ್ಟುಕೊಳ್ಳುವುದೇ ಕ್ರೀಡಾಕೂಟ. ಪ್ರತಿನಿತ್ಯ ಅಭ್ಯಾಸ ಮಾಡಿದರೆ ಮಾತ್ರ ಕ್ರೀಡೆಯಲ್ಲಿ ಸಾಧನೆಮಾಡಬಹುದು, ಅಭ್ಯಾಸ ಇಲ್ಲದಿದ್ದರೆ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಕೈ, ಕಾಲುಗಳಿಗೆ ಪೆಟ್ಟಾಗುತ್ತದೆ. ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ, ಮನಸ್ಸು ಸರಿಯಾದ ರೀತಿ ಸ್ಪಂಧಿಸಬೇಕೆಂದರೆ ದೇಹ ಸ್ಪಂದಿಸಬೇಕು. ಇವೆರಡು ಸಮಾಗಮ ಆದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ, ಸಮಾಜದಲ್ಲಿ ಚುನಾಯಿತ ಪ್ರತಿನಿಧಿಗಳು ಎಷ್ಟು ಮುಖ್ಯವೋ ಅಷ್ಟೇ ಸರ್ಕಾರಿ ನೌಕರರು ಪ್ರಾಮುಖ್ಯತೆ ಹೊಂದಿದ್ದಾರೆ. ಅದಕ್ಕಾಗಿ ಸರ್ಕಾರಿ ನೌಕರರ ಕ್ರೀಡಾಕೂಟ ಏರ್ಪಡಿಸಲಾಗಿದೆ.

ಸಮಾಜದ ಏಳಿಗೆಗಾಗಿ ನಾವೆಲ್ಲರೂ ದುಡಿಯುತ್ತಿರುವುದರಿಂದ ಸದೃಢರಾಗಲು, ಆರೋಗ್ಯವಂತವರಾಗಲು ಕ್ರೀಡೆ ಸಹಕಾರಿಯಾಗಿದೆ, ಆರೋಗ್ಯ ಸರಿಯಿಲ್ಲದಿದ್ದರೆ ಆಲಸ್ಯ ಹೆಚ್ಚಾಗಿ ಕೆಲಸಮಾಡಲು ಸಾಧ್ಯವಾಗುವುದಿಲ್ಲ. ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಹೋಗುವ ಸರ್ಕಾರಿ ನೌಕರರಿಗೆ ಹೆಚ್ಚು ಸಹಕಾರ, ಗೌರವ ನೀಡಲಾಗುವುದು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ಜಯರಾಮು ಮಾತನಾಡಿ, ನಾಯಕತ್ವ ಗುಣ ವೃದ್ಧಿಗೆ ಕ್ರೀಡೆ ಸಹಕಾರಿಗಿದ್ದು, ಕ್ರೀಡೆ ನಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರನಾಗಿ ಮಾಡುತ್ತದೆ ಹಾಗೂ ಆರೋಗ್ಯವಂತ ಜೀವನಕ್ಕೆ ಕ್ರೀಡೆ ಬಹುಮುಖ್ಯವಾಗಿದೆ ಎಂದು ಹೇಳಿದರು.

ಕ್ರೀಡೆ ಆಧುನಿಕ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಮತ್ತು ಮಹತ್ವವನ್ನು ಪಡೆದಿದೆ. ಸರ್ಕಾರಿ ನೌಕರರು ಪ್ರತಿ ನಿತ್ಯ ಜಂಜಾಟದಲ್ಲಿರುವ ಮಧ್ಯೆ ಒಂದು ದಿನ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕವಾಗಿ ನೆಮ್ಮದಿಕಾಣಲು ಸಾಧ್ಯ ಎಂದರು.

ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಶಿವಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್.ಮಂಜುನಾಥ್, ಬಿಇಒ ಚಂದ್ರಶೇಖರಯ್ಯ, ಇಸಿಒ ನಾರಾಯಣ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಗೋವಿಂದರಾಜು, ರಾಜ್ಯ ಪರಿಷತ್ ಸದಸ್ಯ ಜಗದೀಶ್, ಖಜಾಂಚಿ ಯೋಗೇಶ್, ಹಿರಿಯ ಉಪಾಧ್ಯಕ್ಷ ಧರಣೇಶ್, ಗೌರವಾಧ್ಯಕ್ಷ ಕಾಂತರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಆರ್.ನರಸಿಂಹಯ್ಯ, ಮಾಜಿ ಅಧ್ಯಕ್ಷ ಶಿವರಾಮಯ್ಯ, ನಿರ್ದೇಶಕರಾದ ಡಾ.ಗೀತಾ, ಭರತ್ ಕುಮಾರ್, ಶಾಲೆ ಮುಖ್ಯಸ್ಥರಾದ ಬಲರಾಮಯ್ಯ, ಸಂದೀಪ್, ಗೌರೀಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪೈರೋಜು, ಗುಣಶೇಖರ್, ಮಲ್ಲಿಕಾರ್ಜುನ ಸ್ವಾಮಿ ಇತರರು ಇದ್ದರು.