ಜಿಲ್ಲೆ

75 ಸಾವಿರ ತಿರಂಗಾ ಫ್ರೀ ವಿತರಣೆ

Bidar

ಬೀದರ್: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಇಲ್ಲಿನ ಗುರುನಾಥ ಕೊಳ್ಳುರ್(ಜಿಕೆ) ಫೌಂಡೇಷನ್ ಹಮ್ಮಿಕೊಂಡ ಜಿಲ್ಲೆಯ ಮನೆ-ಮನೆಗೂ 75 ಸಾವಿರ ರಾಷ್ಟ್ರಧ್ವಜ ಉಚಿತ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಶ್ರೀ ಸಿದ್ಧಾರೂಢ ಮಠ(ಗುಂಪಾ)ದಲ್ಲಿ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಹರ್ ಘರ್ ತಿರಂಗಾ ಕಾರ್ಯಕ್ರಮ ಮಕ್ಕಳು, ಯುವಕರು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲಿದೆ. ಈಗ ನಡೆದಿರುವ ಕೆಲಸ-ಕಾರ್ಯಗಳು ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಭಾರತವನ್ನು ವಿಶ್ವ ಗುರುವಿನ ಸ್ಥಾನಕ್ಕೆ ಒಯ್ಯುವುದು ಖಚಿತ ಎಂದು ಅಭಿಪ್ರಾಯಪಟ್ಟರು.

ಹಿರಿಯ ಉದ್ಯಮಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಕೊಡುಗೈ ದಾನಿಗಳಿದ್ದು, ಸಮಾಜೋಧಾರ್ಮಿಕ ಮತ್ತು ಜನಪರ ಕೆಲಸಗಳಿಗೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. 75 ಸಾವಿರ ರಾಷ್ಟ್ರ ಧ್ವಜಗಳನ್ನು ಜನರ ಮನೆಗೆ ಮುಟ್ಟಿಸುತ್ತಿರುವುದು ಶ್ಲಾಘನೀಯ. ನಾನಾ ಜನಸೇವೆ ಚಟುವಟಿಕೆ ಮುಖಾಂತರ ಗುರುನಾಥ ಕೊಳ್ಳುರ್ ಫೌಂಡೇಷನ್ ಜನಮಾನಸದಲ್ಲಿ ಉಳಿಯುವ ಮಹತ್ಕಾರ್ಯ ಮಾಡಲಿದೆ ಎಂದು ಸದಾಶಯ ವ್ಯಕ್ತಪಡಿಸಿದರು.

ಬಿಡಿಎ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ರಾಷ್ಟ್ರದ ಪ್ರತಿಯೊಬ್ಬರನ್ನು ಒಗ್ಗೂಡಿಸಲು ಮತ್ತು ಯುವಕರಲ್ಲಿ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದಾರೆ. ಎಲ್ಲರೂ ಸ್ವ ಇಚ್ಛೆಯಿಂದ ಭಾಗಿಯಾಗಿ ದೇಶಪ್ರೇಮ, ಸ್ವಾಭಿಮಾನ ಪ್ರದರ್ಶಿಸಬೇಕು. ಸಶಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಕೆ ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ `ಹರ್ ಘರ್ ತಿರಂಗಾ' ಕರೆಗೆ ಪೂರಕವಾಗಿ ಜಿಲ್ಲೆಯ ಪ್ರತಿ ಮನೆ ಮೇಲೂ ತಿರಂಗಾ ಧ್ವಜ ಹಾರಿಸಬೇಕೆಂಬ ನಿಟ್ಟಿನಲ್ಲಿ ಫೌಂಡೇಷನ್ ವತಿಯಿಂದ ರಾಷ್ಟ್ರ ಧ್ವಜ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಎಲ್ಲ ಕೆಲಸಗಳಲ್ಲಿ ಫೌಂಡೇಷನ್ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಹೇಳಿದರು.

ಅಪರ ಡಿಸಿ ಶಿವಕುಮಾರ ಶೀಲವಂತ, ಎಸ್ಪಿ ಡಿ.ಕಿಶೋರಬಾಬು, ನಗರಸಭೆ ಆಯುಕ್ತ ಪ್ರಬುದ್ಧ ಕಾಂಬ್ಳೆ, ಪ್ರಮುಖರಾದ ಪ್ರಭುರಾವ ವಸ್ಮತೆ, ವಿರೂಪಾಕ್ಷ ಗಾದಗಿ ಇದ್ದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು. ಗುರುನಾಥ ರಾಜಗೀರಾ ನಿರೂಪಣೆ ಮಾಡಿದರು. ಸಿದ್ಧಾರೂಢ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ತಿರಂಗಾ ಧ್ವಜ ವಿತರಿಸಲಾಯಿತು. ನಂತರ ಕರ್ನಾಟಕ, ಬಿವಿಬಿ  ಕಾಲೇಜಿಗೆ ತೆರಳಿ ಸಹಸ್ರಾರು ವಿದ್ಯಾರ್ಥಿಗಳಿಗೆ ಝಂಡಾ ನೀಡಿ ಮನೆ ಮೇಲೆ ಹಾರಿಸಲು ಕೋರಲಾಯಿತು.


ಫಲಾಪೇಕ್ಷೆ ಇಲ್ಲದೆ ಸೇವಾ ಕಾರ್ಯ

ಯಾವುದೇ ಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಸೇವೆ ಮಾಡುವ ಧ್ಯೇಯದಿಂದ ಫೌಂಡೇಷನ್ ಆರಂಭಿಸಲಾಗಿದೆ. ತಿರಂಗಾ ಅಭಿಯಾನ ಮೂಲಕ ಫೌಂಡೇಷನ್ ತನ್ನ ಕೆಲಸಕ್ಕೆ ಅಕೃತ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳುರ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಎಲ್ಲರಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಜಾಗೃತಗೊಳಿಸಲು ಹರ್ ಘರ್ ತಿರಂಗಾ ಕಾರ್ಯಕ್ರಮ ಘೋಷಿಸಿದ್ದಾರೆ. ಜಾತಿ, ಮತ, ಪಂಥ ಎನ್ನದೆ ಎಲ್ಲರೂ ರಾಷ್ಟ್ರ ಧರ್ಮ ಶ್ರೇಷ್ಠ ಎಂದು ದೇಶ ಸೇವೆಗೆ ಸದಾ ಸನ್ನದ್ಧರಾಗಲು ಸಂಕಲ್ಪ ಮಾಡಬೇಕಿದೆ ಎಂದರು.