ಆರ್.ತುಳಸಿಕುಮಾರ್
ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಪತ್ತೆ ಸಮೀಕ್ಷೆ ನಡೆಸಲಾಗಿದ್ದು, ಈವರೆಗೆ 7,438 ಮಕ್ಕಳನ್ನು ಗುರುತಿಸಲಾಗಿದೆ. ಇವರೆಲ್ಲರೂ ನಾನಾ ಕಾರಣಗಳಿಂದ ಶಾಲೆಗೆ ತೆರಳುತ್ತಿಲ್ಲ ಎಂಬ ಮಾಹಿತಿ ಕಲೆ ಹಾಕಲಾಗಿದೆ.
ಪ್ರತೀ ವರ್ಷ ಶಿಕ್ಷಣ ಇಲಾಖೆಯು ಶೈಕ್ಷಣಿಕ ಸಾಲಿನ ಆರಂಭದಲ್ಲಿ ಮಕ್ಕಳ ದಾಖಲಾತಿ ಮಾಡಿಕೊಳ್ಳಲು ಆಂದೋಲನ ಕೈಗೊಳ್ಳುತ್ತದೆ. ಈ ವೇಳೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನೇ ಗುರಿಯಾಗಿರಿಸಿ ಸ್ಕೂಲ್‌ಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಇದರ ಹೊರತಾಗಿಯೂ ಹಲವು ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಅದರಲ್ಲೂ ರಾಜಧಾನಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ 10-14 ವರ್ಷಕ್ಕಿಂತ ಕೆಳಗಿನ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿಯುತ್ತಿದ್ದಾರೆ.
ಪಾಲಕರು ಉದ್ಯೋಗಕ್ಕೆ ಹೋದ ವೇಳೆ ಮನೆಯಲ್ಲಿ ಸಣ್ಣ ಮಕ್ಕಳ ಆರೈಕೆ, ಮನೆ ಕಾವಲು, ಅನಾರೋಗ್ಯ, ಬಡತನ ಇತ್ಯಾದಿ ಅಂಶಗಳು ಕಾರಣವಾಗಿವೆ. ಇದನ್ನು ಗಮನಿಸಿ ಸ್ಥಳೀಯ ಶಾಲಾ ಮುಖ್ಯೋಪಾಧ್ಯಯರು, ಎಸ್‌ಡಿಎಂಸಿ ಸಹಕಾರದಲ್ಲಿ ಇಂತಹ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತಿದೆ. ಆದರೂ, ಹಲವು ಸಾವಿರ ಮಕ್ಕಳು ಸ್ಕೂಲ್‌ಗೆ ಹೋಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಕಡ್ಡಾಯ ಮಾಡಿರುವುದರಿಂದ ಸಮುದಾಯದ ವಿವಿಧ ಸಂಘಟನೆಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸ್ಕೂಲ್‌ನತ್ತ ಕರೆತರುವ ಕಾರ್ಯದಲ್ಲಿ ನಿರತವಾಗಿವೆ.
ಇತ್ತೀಚಿಗೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ ಹೈಕೋರ್ಟ್ ಅಂತಹ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶ ಬಿಬಿಎಂಪಿಗೂ ಅನ್ವಯಿಸಿದ್ದರಿಂದ ಎಂಟೂ ವಲಯಗಳಲ್ಲಿ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ.
7,438 ಮಕ್ಕಳ ಪತ್ತೆ:
ಪಾಲಿಕೆ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ವಲಯವಾರು ಮಟ್ಟದಲ್ಲಿ ನಡೆದಿರುವ ಸರ್ವೆಯಲ್ಲಿ ಈವರೆಗೆ 7,438 ಮಕ್ಕಳು ಪತ್ತೆಯಾಗಿದ್ದಾರೆ. ವಿಶೇಷವೆಂದರೆ ಎಂಟೂ ವಲಯಗಳ ಪೈಕಿ ಪಶ್ಚಿಮ ವಲಯದಲ್ಲಿ 2,500 ಮಕ್ಕಳು ಪತ್ತೆಯಾಗಿದ್ದಾರೆ. ಆನಂತರದ ಸ್ಥಾನ ಯಲಹಂಕ ವಲಯದಲ್ಲಿ 2,147 ಹಾಗೂ ಪೂರ್ವ ವಲಯದಲ್ಲಿ 1,453 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಈ ತಿಂಗಳ 20ರವರೆಗೂ ಸಮೀಕ್ಷೆ ಮುಂದುವರಿಯಲಿದ್ದು, ಆ ವೇಳೆಗೆ 10 ಸಾವಿರ ಮಕ್ಕಳು ಪತ್ತೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ನಡೆದಿರುವ ಸಮೀಕ್ಷಾ ಕಾರ್ಯ ಈ ತಿಂಗಳ 20ರ ವೇಳೆಗೆ ಗುರು ನೀಡಲಾಗಿದೆ. ಹೆಚ್ಚು ಮನೆಗಳಿಗೆ ತೆರಳಬೇಕಿರುವ ಕಾರಣ ಸಮೀಕ್ಷೆಯು ಈ ತಿಂಗಳ ಅಂತ್ಯದವರೆಗೂ ನಡೆಯಬಹುದು. ಆ ಬಳಿಕ ಕ್ರೋಡೀಕರಿಸಿದ ರೂಪದಲ್ಲಿ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಲಯವಾರು ಮಕ್ಕಳ ಪತ್ತೆ ವಿವರ:
ವಲಯದ ಹೆಸರು ಮಕ್ಕಳ ಸಂಖ್ಯೆ
ಪೂರ್ವ 1453
ಪಶ್ಚಿಮ 2500
ದಕ್ಷಿಣ -
ಯಲಹಂಕ 2,147
ಮಹದೇವಪುರ 470
ಬೊಮ್ಮನಹಳ್ಳಿ 177
ಆರ್.ಆರ್.ನಗರ 505
ದಾಸರಹಳ್ಳಿ 186
ಥಣಿಸಂದ್ರ ವಾರ್ಡ್‌ನಲ್ಲಿ ಅತಿಹೆಚ್ಚು:
ಬೆಂಗಳೂರು ಉತ್ತರ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿರುವ ಯಲಹಂಕ ವಲಯದಲ್ಲಿ 2,147 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ವಾರ್ಡ್‌ವಾರು ಅಂಕಿ-ಅಂಶ ಪ್ರಕಾರ ಬ್ಯಾಟರಾಯನಪುರ ಮತಕ್ಷೇತ್ರಕ್ಕೆ ಒಳಪಟ್ಟಿರುವ ಥಣಿಸಂದ್ರ ವಾರ್ಡ್‌ನಲ್ಲಿ ಅತಿಹೆಚ್ಚು ಮಕ್ಕಳು (276) ಪತ್ತೆಯಾಗಿದ್ದಾರೆ. ಇಲ್ಲಿ ಬಡತನ ಪ್ರಮಾಣ ಹೆಚ್ಚಿರುವ ಕಾರಣ ಹಲವು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂಬ ಮಾಹಿತಿ ಕಲೆಹಾಕಲಾಗಿದೆ. ಇದೇ ಕ್ಷೇತ್ರದ ದೊಡ್ಡಬೊಮ್ಮಸಂದ್ರ ವಾರ್ಡ್ - 186, ಬ್ಯಾಟರಾಯನಪುರ ವಾರ್ಡ್ - 183, ಜಕ್ಕೂರು ವಾರ್ಡ್- 180, ಕೊಡಿಗೇಹಳ್ಳಿ ವಾರ್ಡ್ - 162 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದಲ್ಲದೆ ಶಿವಾಜಿನಗರ ಕ್ಷೇತ್ರದ ರಾಮಸ್ವಾಮಿಪಾಳ್ಯ ವಾರ್ಡ್‌ನಲ್ಲಿ 247, ಚಾಮರಾಜಪೇಟೆ ವಾರ್ಡ್‌ನಲ್ಲಿ 163, ಮೂಡಲಪಾಳ್ಯ ವಾರ್ಡ್‌ನಲ್ಲಿ 159, ಗೋವಿಂದರಾಜನಗರ ವಾರ್ಡ್‌ನಲ್ಲಿ 149 ಮಕ್ಕಳು ಶಾಲೆಗೆ ತೆರಲುತ್ತಿಲ್ಲ ಎಂಬ ಮಾಹಿತಿ ಸಂಗ್ರಹಿಸಲಾಗಿದೆ.
ರಾಜಧಾನಿಯಲ್ಲೇ ಸಮೀಕ್ಷೆ ವಿಳಂಬ:
ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮೀಕ್ಷೆಯನ್ನು ಹಿಂದಿನ ವರ್ಷ ಎಲ್ಲ ಜಿಲ್ಲೆಗಳಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಒಳಗೊಂಡಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಬ್ಬಂದಿ ಅಲಭ್ಯದಿಂದ ಸಮೀಕ್ಷೆ ವಿಳಂಬವಾಗಿತ್ತು. ಮೂರು ಬಾರಿ ಟೆಂಡರ್ ಆಹ್ವಾನಿಸಿದ್ದರೂ, ಯಾವ ಏಜೆನ್ಸಿಯೂ ಕಾರ್ಯಕರ್ತರನ್ನು ಒದಗಿಸಲು ಹಿಂದೇಟು ಹಾಕಿತ್ತು. ಕೊನೆಗೆ ಖಾಸಗಿ ಕಂಪನಿಗೆ ಗುತ್ತಿಗೆ ವಹಿಸಿ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮೀಕ್ಷೆಯನ್ನು ಹಿಂದಿನ ವರ್ಷ ಎಲ್ಲ ಜಿಲ್ಲೆಗಳಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಒಳಗೊಂಡಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಬ್ಬಂದಿ ಅಲಭ್ಯದಿಂದ ಸಮೀಕ್ಷೆ ವಿಳಂಬವಾಗಿತ್ತು. ಮೂರು ಬಾರಿ ಟೆಂಡರ್ ಆಹ್ವಾನಿಸಿದ್ದರೂ, ಯಾವ ಏಜೆನ್ಸಿಯೂ ಕಾರ್ಯಕರ್ತರನ್ನು ಒದಗಿಸಲು ಹಿಂದೇಟು ಹಾಕಿತ್ತು. ಕೊನೆಗೆ ಖಾಸಗಿ ಕಂಪನಿಗೆ ಗುತ್ತಿಗೆ ವಹಿಸಿ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.