ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಬಜೆಟ್ ಮಂಡಿಸಿದರು. 
ಜಿಲ್ಲೆ

ಪಾಲಿಕೆಗೆ 741.25 ಕೋಟಿ ರೂ. ಆದಾಯ ನಿರೀಕ್ಷೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನ ಆರಂಭಿಕ ಶಿಲ್ಕು 325.78 ಕೋಟಿ ರೂ. ಆಗಿದೆ. ಮುಂದಿನ ಸಾಲಿನಲ್ಲಿ 741.25 ಕೋಟಿ ರೂ. ಆದಾಯ ಹಾಗೂ 886.33 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, 180.70 ಕೋಟಿ ರೂ.ಗಳ ಉಳಿಕೆ ಕಾಣಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಬಜೆಟ್ ಮಂಡಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ 930 ಕೋಟಿ ರೂ.ಗಳಲ್ಲಿ ಒಟ್ಟು 57 ಕಾಮಗಾರಿ ಮತ್ತು 4 ಪಿಪಿಪಿ ಯೋಜನೆ ಅನುಮೋದಿಸಲಾಗಿದೆ. ಇದರಲ್ಲಿ 39 ಯೋಜನೆ ಪೂರ್ಣಗೊಂಡಿದೆ. 8 ಕಾಮಗಾರಿ ಪ್ರಗತಿಯಲ್ಲಿದೆ. 10 ಯೋಜನೆಗಳಿಗೆ ಇಲಾಖೆ ಅನುದಾನ ಬಿಡುಗಡೆಗೊಳಿಸಿದೆ. ಈವರೆಗೆ 916 ಕೋಟಿ ರೂ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಲಾಗಿದೆ. ಉಳಿದ 73.50 ಕೋಟಿ ರೂ.ಗೆ ಅನುಮೋದನೆ ಸಿಕ್ಕಿದ್ದು, ಸ್ಮಾರ್ಟ್‌ಸಿಟಿ ಕಂಪನಿಗೆ ಪಾವತಿಯಾಗಲಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ತಿಳಿಸಿದರು.

*ವಿವಿಧ ಮೂಲಗಳಿಂದ ಆದಾಯ ಸಂಗ್ರಹ ನಿರೀಕ್ಷೆ

ನೀರಿನ ತೆರಿಗೆಯಿಂದ 5,500 ಲಕ್ಷ ರು., ಆಸ್ತಿ ತೆರಿಗೆ 9,591.45 ಲಕ್ಷ ರು., ಉದ್ದಿಮೆ ಪರವಾನಿಗೆ 460.43 ಲಕ್ಷ ರೂ, ಎಸ್ ಡಬ್ಲ್ಯೂಎಂ ಕರ 2,500 ಲಕ್ಷ ರೂ., ರಸ್ತೆ ಕಡಿತ ಮತ್ತು ಪುನರ್ ನಿರ್ಮಾಣ ಶುಲ್ಕ 875 ಲಕ್ಷ ರೂ., ಒಳಚರಂಡಿ ಶುಲ್ಕ 440 ಲಕ್ಷ ರೂ., ಮಾರುಕಟ್ಟೆ, ಸ್ಟಾಲ್ ಹಾಗೂ ಇತರ ಬಾಡಿಗೆ 539 ಲಕ್ಷ ರೂ., ಖಾತಾ ವರ್ಗಾವಣೆ ಶುಲ್ಕ 402 ಲಕ್ಷ ರೂ., ಕಟ್ಟಡ ಪರವಾನಿಗೆ ಮತ್ತು ಪ್ರೀಮಿಯಂ ಎಫ್‌ಎಆರ್ 2,481.85 ಲಕ್ಷ ರೂ., ಅಧಿಭಾರ ಶುಲ್ಕ 1,007 ಲಕ್ಷ ರೂ. ಹಾಗೂ ಜಾಹಿರಾತು ತೆರಿಗೆ 370 ಲಕ್ಷ ರೂ. ಮೊತ್ತ ಸಂಗ್ರಹ ನಿರೀಕ್ಷಿಸಲಾಗಿದೆ ಎಂದರು.

*ಯೋಜನೆಗಳಿಗೆ ಅನುದಾನ ಹಂಚಿಕೆ

ನೀರು ಸರಬರಾಜು ನಿರ್ವಹಣೆಗೆ 23.17 ಕೋಟಿ ರೂ. ಹಾಗೂ ತುಂಬೆ ಡ್ಯಾಂ ನವೀಕರಣಕ್ಕೆ 1 ಕೋಟಿ ರೂ. ಕಾದಿರಿಸಲಾಗಿದೆ. ರಾಜಾ ಕಾಲುವೆಗಳ ಸಮಗ್ರ ನಿರ್ವಹಣೆ ಮೂಲಕ ಕೃತಕ ನೆರೆ ಮುಕ್ತ ಮಂಗಳೂರು ಮಾರ್ಪಡಿಸಲು ನಿರ್ದಿಷ್ಟ ಕ್ರಿಯಾ ಯೋಜನೆಗೆ 9.25 ಕೋಟಿ ರೂ. ಮೀಸಲಿರಿಸಲಾಗಿದೆ. ಬಜಾಲ್, ಪಚ್ಚನಾಡಿ ಒಳಚರಂಡಿ ಸಂಸ್ಕರಣಾ ಘಟಕ(ಎಸ್‌ಟಿಪಿ) ಮೇಲ್ದರ್ಜೆಗೆ ಕ್ರಮ, ಕುದ್ರೋಳಿ, ಪಾಂಡೇಶ್ವರ, ಕಡೆಕಾರ್, ಕೊಡಿಯಾಲಗುತ್ತು ವೆಟ್‌ವೆಲ್‌ಗಳ ಉನ್ನತೀಕರಣ, ಅತ್ತಾವರ ಟ್ರೀಟ್‌ಮೆಂಟ್ ಪ್ಲಾಂಟ್ ವೈಜ್ಞಾನಿಕ ರೀತಿ ಅಭಿವೃದ್ಧಿ, ಪಂಪ್‌ವೆಲ್, ಅತ್ತಾವರ, ಬಿಜೈ, ಮಹಾಕಾಳಿ ಪಡ್ಪುಗಳಲ್ಲಿ ಹಳೆಯ ಒಳಚರಂಡಿ ಮಾರ್ಗಗಳ ಬದಲಾವಣೆ, ನೈಸರ್ಗಿಕ ಜಲಮೂಲಗಳಲ್ಲಿ ಒಳಚರಂಡಿ ವಿಸರ್ಜನೆ ನಿಲ್ಲಿಸಲು ಎನ್‌ಜಿಟಿ ನಿಧಿಯಡಿ 9.5 ಕಿ.ಮೀ. ಟ್ರಂಕ್ ಒಳಚರಂಡಿ ಜಾಲದ ಉನ್ನತೀಕರಣ. ಇದಕ್ಕಾಗಿ 49.37 ಕೋಟಿ ರೂ. ವಿನಿಯೋಗಕ್ಕೆ ನಿರ್ಧಾರ. ರಸ್ತೆ, ಚರಂಡಿ ಹಾಗೂ ಪಾದಚಾರಿ ಪಥಗಳ ನಿರ್ಮಾಣ-ನಿರ್ವಹಣೆಗೆ 67.31 ಕೋಟಿ ರೂ. ಮೀಸಲು ಯೋಜನೆ ರೂಪಿಸಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ತಿಳಿಸಿದರು.

------------

ಮಾರುಕಟ್ಟೆಗಳಿಂದ ಆದಾಯ ನಿರೀಕ್ಷೆ

ಕದ್ರಿ ಮಾರುಕಟ್ಟೆ ನೆಲ ಮತ್ತು ಮೊದಲ ಮಹಡಿಯನ್ನು ಗುತ್ತಿಗೆ ವಹಿಸಲಾಗಿದ್ದು, ವಾರ್ಷಿಕ 1.20 ಕೋಟಿ ರು. ಆದಾಯ ನಿರೀಕ್ಷೆ, ಉಳಿದ 2 ಮತ್ತು 3ನೇ ಮಹಡಿಯ ಸ್ಟಾಲ್ ಹರಾಜಿಗೆ ನಿರ್ಧಾರ. ಕಂಕನಾಡಿ ಮಾರುಕಟ್ಟೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದೆ ಹರಾಜಿಗೆ ಕ್ರಮ, ವಾರ್ಷಿಕ 3 ಕೋಟಿ ರು. ಆದಾಯ ಗುರಿ, ಕೇಂದ್ರ ಮಾರುಕಟ್ಟೆ ಪಿಪಿಪಿ ಮಾದರಿಯಲ್ಲಿ ಪೂರ್ಣಗೊಂಡ ಬಳಿಕ 3.07 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.