ಹನೂರು: ತೀವ್ರ ಕುತೂಹಲ ಮೂಡಿಸಿದ್ದ ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆಗೆ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಆರ್.ನರೇಂದ್ರ 74 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಸಾಲಗಾರರ ಕ್ಷೇತ್ರದಿಂದ 11 ನಿರ್ದೇಶಕ ಸ್ಥಾನಕ್ಕೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಹಾಗೂ ಉದ್ದನೂರು ಗಿರೀಶ್ ಸ್ಪರ್ಧಿಸಿದ್ದರು. ಚುನಾವಣೆಯು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ 10 ರಿಂದ 3 ಗಂಟೆಯವರೆಗೆ ನಡೆಯಿತು. ಸಾಲಗಾರರ ಕ್ಷೇತ್ರದಲ್ಲಿ 971 ಮತದಾರರ ಪೈಕಿ 851 ಮತಗಳು ಚಲಾವಣೆಗೊಂಡವು. ಸಾಲಗಾರರಲ್ಲದ ಕ್ಷೇತ್ರದಲ್ಲಿ 274 ಮತದಾರರ ಪೈಕಿ 270 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
25 ವರ್ಷಗಳಿಂದ ನಿರ್ದೇಶಕರ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಮಾಜಿ ಶಾಸಕ ಆರ್.ನರೇಂದ್ರ ಅವರು ಸಹ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆ ಆರ್.ನರೇಂದ್ರ ಅವರು ಸಹ ಸಾಲಗಾರರಲ್ಲದ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು. ಇವರ ಪ್ರತಿಸ್ಪರ್ಧಿಯಾಗಿ ಉದ್ದನೂರು ಗ್ರಾಮದ ಗಿರೀಶ್ ಅವರು ಸ್ಪರ್ಧಿಸಿದ್ದರು. ಹಾಗಾಗಿ ಈ ಚುನಾವಣೆ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ನಡೆದ ಚುನಾವಣೆಯಲ್ಲಿ ಗಿರೀಶ್ 97 ಮತಗಳನ್ನು ಪಡೆದರೆ, ಮಾಜಿ ಶಾಸಕ ಆರ್.ನರೇಂದ್ರ ಅವರು 171 ಮತಗಳನ್ನು ಪಡೆಯುವುದರ ಮೂಲಕ 74 ಮತದ ಅಂತರದಿಂದ ಜಯಗಳಿಸಿದರು.
ಸಾಲಗಾರರ ಕ್ಷೇತ್ರದಿಂದ ಗೆದ್ದವರು: ನಡೆದ ಚುನಾವಣೆಯಲ್ಲಿ ನಿಗದಿಪಡಿಸಿದ್ದ ಮೀಸಲಿಗೆ ಅನುಗುಣವಾಗಿ ಹೆಚ್ಚು ಮತಗಳನ್ನು ಗಳಿಸಿದ ರಾಜುಗೌಡ, ಎಲ್.ನಟರಾಜು, ಎಸ್.ಅನಿಲ್‌ಕುಮಾರ್, ಎಸ್.ಲಿಂಗೇಗೌಡ, ರಂಗಸ್ವಾಮಿನಾಯ್ಡು, ನಾಗರತ್ನಮ್ಮ, ಪುಷ್ಪಲತಾ, ಗೋವಿಂದ, ಶ್ರೀನಿವಾಸ್‌ಗೌಡ, ಟಿ.ಎಸ್. ಮಹದೇವ ಹಾಗೂ ಕೆಂಚನಾಯ್ಕ ಜಯಗಳಿಸಿದರು. ಫಲಿತಾಂಶ ಘೋಷಿಸಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಎಂಡಿಸಿಸಿ ಬ್ಯಾಂಕ್‌ನಲ್ಲಿ ಹಿಂದೆ ರೈತರಿಗೆ ಸುಮಾರು 300 ಕೋಟಿ ರೂ.ಗಿಂತ ಹೆಚ್ಚು ಸಾಲ ನೀಡಲಾಗಿತ್ತು. ಇದರಲ್ಲಿ ಮೈಸೂರಿಗೆ 250 ಕೋಟಿ ರೂ., ಚಾ.ನಗರಕ್ಕೆ 28 ಕೋಟಿ ರೂ. ನೀಡಲಾಗಿತ್ತು. ನಾನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ಬಳಿಕ ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಇದಕ್ಕೆ ಅಧಿಕಾರಿಗಳು ಮೈಸೂರು ಜಿಲ್ಲೆಯಿಂದ ಸಮರ್ಪಕವಾಗಿ ಸಾಲ ಮರು ಪಾವತಿಯಾಗುತ್ತಿದೆ ಎಂದು ತಿಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದಾಗ ಮೈಸೂರು ಜಿಲ್ಲೆಯಿಂದ ಶೇ.56ರಷ್ಟು ಸಾಲ ಮಾತ್ರ ಮರು ಪಾವತಿಯಾಗಿದ್ದರೆ, ಚಾ.ನಗರದಿಂದ ಶೇ.96 ರಷ್ಟು ಸಾಲ ಮರುಪಾವತಿಯಾಗಿತ್ತು. ಇದನ್ನು ಮನಗಂಡು ಚಾ.ನಗರಕ್ಕೆ ಹೆಚ್ಚಿನ ಆದ್ಯತೆ ನೀಡಿ ಎರಡೂವರೆ ವರ್ಷದ ಅವಧಿಯಲ್ಲಿ ಜಿಲ್ಲೆಗೆ 400 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು. ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಚುನಾವಣೆಯಲ್ಲಿ ನಾನು ಜಯಗಳಿಸಿದ್ದೇನೆ ಎಂದರು.