ಜಿಲ್ಲೆ

ಜಿಲ್ಲೆಯಲ್ಲಿ ಶೇ.74.59ರಷ್ಟು ಮತದಾನ

Gadag

ಗದಗ: ಕರ್ನಾಟಕ ವಿಧಾನ ಪರಿಷತ್​ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಶೇ. 74.59 ರಷ್ಟು ಮತದಾನವಾಗಿದೆ.

ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಆರಂಭದಲ್ಲಿ ನೀರಸವಾಗಿತ್ತು. ಹೊತ್ತು ಏರತೊಡಗಿದಂತೆ ಮತದಾನ ಚುರುಕುಗೊಂಡಿತು. ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದೇ ಮತದಾನ ಪ್ರಕ್ರಿಯೆ ಸುಗಮವಾಗಿ ಸಾಗಿತು.

ಬಿಜೆಪಿ ಅಭ್ಯರ್ಥಿ ಪ್ರೊ.ಎಸ್.ವಿ. ಸಂಕನೂರ ಅವರು ನಗರದ ಮುನ್ಸಿಪಲ್ ಕಾಲೇಜ್​ನಲ್ಲಿ ಸ್ಥಾಪಿಸಿದ್ದ ಮತಗಟ್ಟೆ 57ರಲ್ಲಿ ಹಕ್ಕು ಚಲಾಯಿಸಿದರು. ಸಚಿವ ಎಚ್.ಕೆ. ಪಾಟೀಲ ಅವರು ತಾಲೂಕಿನ ಹುಲಕೋಟಿಯ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿನ ಮತಗಟ್ಟೆ 65ರಲ್ಲಿ ಹಕ್ಕು ಚಲಾಯಿಸಿದರು. ಇತ್ತೀಚೆಗೆ ಅಪಘಾತಕ್ಕೀಡಾಗಿ ಕಾಲು ಮುರಿದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗದಗ ಪುಟ್ಟರಾಜ ನಗರ ನಿವಾಸಿ ಮರ್ದಾನ್ ಅಲಿ ದೊಡ್ಡಮನಿ ಅವರು ಆಂಬುಲೆನ್ಸ್ ಮೂಲಕ ಮತಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.

ಜಿಲ್ಲಾದ್ಯಂತ ಒಟ್ಟು 29 ಮತಗಟ್ಟೆಗಳಿದ್ದು, 10,979 ಪುರುಷ, 4998 ಮಹಿಳೆಯರು ಸೇರಿ ಒಟ್ಟು 15978 ಪದವೀಧರ ಮತದಾರರಿದ್ದಾರೆ. ಇದರಲ್ಲಿ 8579 ಪುರುಷರು (ಶೇ. 78.14) ಹಾಗೂ 3339 ಮಹಿಳೆಯರು (ಶೇ. 66.81) ಸೇರಿ 11,918 ಮತದಾರರರು (ಶೇ. 74.59) ಮತದಾನ ಮಾಡಿದ್ದಾರೆ.

ಶೈಕ್ಷಣಿಕ ಸಂಸ್ಥೆ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕ್, ಕೈಗಾರಿಕೆ ಹಾಗೂ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅರ್ಹ ನೋಂದಾಯಿತ ಪದವೀಧರ ಮತದಾರರಿಗೆ ಮತದಾನ ಮಾಡಲು ವಿಶೇಷ ಸಾಂರ್ದಭಿಕ ರಜೆ ಘೊಷಿಸಲಾಗಿತ್ತಾದರೂ ಮತದಾನ ಪ್ರಕ್ರಿಯೆ ನಿಧಾನವಾಗಿತ್ತು.

ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಪಾಟೀಲ

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹಾಗೂ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರು ನರಗುಂದ ಮತ್ತು ಕೊಣ್ಣೂರಿನ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಗಳ ಬಗ್ಗೆ ಕಾರ್ಯಕರ್ತರು, ಮುಖಂಡರಿಂದ ಮಾಹಿತಿ ಪಡೆದುಕೊಂಡರು. ನರಗುಂದ ಮತಗಟ್ಟೆ ಕೇಂದ್ರಕ್ಕೆ 5 ಗಂಟೆ ಒಳಗೆ ಬಂದಿದ್ದ 25ಕ್ಕೂ ಅಧಿಕ ಮತದಾರರಿಗೆ ಟೋಕನ್ ನೀಡಲಾಗಿತ್ತು. ಇದರಿಂದ 5 ಗಂಟೆಗೆ ಮುಕ್ತಾಯಗೊಳ್ಳಬೇಕಿದ್ದ ಮತದಾನ ಪ್ರಕ್ರಿಯೆ ಸಂಜೆ 5.45ರವರೆಗೂ ಮುಂದುವರಿದಿತ್ತು. ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಅನೇಕರ ಹೆಸರುಗಳು ಕಾಣೆಯಾಗಿದ್ದವು. ಈ ಬಗ್ಗೆ ಮಾಹಿತಿಯಿಲ್ಲದೆ ಮತದಾನಕ್ಕೆ ಆಗಮಿಸಿದ್ದ ಕೆಲವರು ಚುನಾವಣೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂದಾಜು 200ಕ್ಕೂ ಹೆಚ್ಚು ಜನ ಮತದಾನದಿಂದ ವಂಚಿತರಾದರು.

ಮುಂಜಾಗ್ರತೆ ಕ್ರಮ

ಕರೊನಾ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತಗಟ್ಟೆಗಳಲ್ಲಿ ಮತದಾರರ ಮಧ್ಯ ಪರಸ್ಪರ ಅಂತರ ಕಾಯ್ದುಕೊಳ್ಳಲಾಗಿತ್ತಲ್ಲದೆ, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಮತದಾನ ಮಾಡಿದ್ದು ಕಂಡು ಬಂದಿತು. ಮತಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ಸಹ ಮಾಸ್ಕ್ ಧರಿಸಿ ಕಾರ್ಯನಿರ್ವಹಿಸಿದರು.

ಮತದಾನಕ್ಕೆ ನಿರಾಕರಣೆ

ಕರೊನಾ ಸೋಂಕಿತರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸೋಂಕಿಗೆ ಒಳಗಾದ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸತೀಶಕುಮಾರ ವಿಜಯವಾಣಿಗೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 230 ಕರೊನಾ ಸೋಂಕಿತರಿದ್ದು, ಇದರಲ್ಲಿ ಇಬ್ಬರು ಮತದಾರರಿದ್ದರು. ಇಬ್ಬರಿಗೂ ಪಿಪಿಇ ಕಿಟ್ ಧರಿಸಿ ಮತದಾನ ಮಾಡಬೇಕೆಂದು ಮನವಿ ಮಾಡಕೊಳ್ಳಲಾಯಿತು. ಆದರೆ, ಅವರು ನಿರಾಕರಿಸಿದರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸತೀಶ ಬಸರೀಗಡಿದ ತಿಳಿಸಿದರು.

ಅಭ್ಯರ್ಥಿಗಳ ಭೇಟಿ

ಲಕ್ಷೆ್ಮೕಶ್ವರ ಅಭ್ಯರ್ಥಿಗಳಾದ ಡಾ.ಆರ್.ಎಂ. ಕುಬೇರಪ್ಪ, ಬಸವರಾಜ ಗುರಿಕಾರ, ಶಾಸಕರಾದ ಎಚ್.ಕೆ. ಪಾಟೀಲ, ರಾಮಣ್ಣ ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ ಸೇರಿ ಆಯಾ ಪಕ್ಷದ ನಾಯಕರು ಲಕ್ಷೆ್ಮೕಶ್ವರದ ಮತಗಟ್ಟೆಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು. ಕೇಂದ್ರದ 100 ಮೀ. ವ್ಯಾಪ್ತಿಯಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು.

ತಾಲೂಕುವಾರು ಮತದಾನ

ಗದಗ: ತಾಲೂಕಿನಲ್ಲಿ 7711 ಮತದಾರರ ಪೈಕಿ 3852 ಪುರುಷ, 1849 ಮಹಿಳೆಯರು ಸೇರಿದಂತೆ ಒಟ್ಟು 5701 (ಶೇ.73.93), ಮುಂಡರಗಿ ತಾಲೂಕಿನಲ್ಲಿ 1318 ಮತದಾರರ ಪೈಕಿ 741 ಪುರುಷ, 249 ಮಹಿಳೆಯರು ಸೇರಿದಂತೆ ಒಟ್ಟು 990 (ಶೇ.75.11), ನರಗುಂದ ತಾಲೂಕಿನಲ್ಲಿ 1176 ಮತದಾರರ ಪೈಕಿ 721 ಪುರುಷ, 224 ಮಹಿಳೆಯರು ಸೇರಿದಂತೆ ಒಟ್ಟು 945 (ಶೇ.80.36), ರೋಣ ತಾಲೂಕಿನಲ್ಲಿ 1512 ಮತದಾರರ ಪೈಕಿ 932 ಪುರುಷ, 207 ಮಹಿಳೆಯರು ಸೇರಿದಂತೆ ಒಟ್ಟು 1139 (ಶೇ.75.33), ಗಜೇಂದ್ರಗಡ ತಾಲೂಕಿನಲ್ಲಿ 2122 ಮತದಾರರ ಪೈಕಿ 1140 ಪುರುಷ, 354 ಮಹಿಳೆಯರು ಸೇರಿದಂತೆ ಒಟ್ಟು 1494 (ಶೇ.70.41), ಶಿರಹಟ್ಟಿ ತಾಲೂಕಿನಲ್ಲಿ 1063 ಮತದಾರರ ಪೈಕಿ 595 ಪುರುಷ, 214 ಮಹಿಳೆಯರು ಸೇರಿದಂತೆ ಒಟ್ಟು 809 (ಶೇ.76.11), ಲಕ್ಷ್ಮೇಶ್ವರ ತಾಲೂಕಿನಲ್ಲಿ 1076 ಸರ್ಕಾರಿ ಪೈಕಿ 599 ಪುರುಷ, 238 ಮಹಿಳೆಯರು ಸೇರಿದಂತೆ ಒಟ್ಟು 837 (ಶೇ.77.79) ಮತದಾರರು ಹಕ್ಕು ಚಲಾಯಿಸಿದ್ದಾರೆ.

ಉಪವಿಭಾಗಾಧಿಕಾರಿ ಪರಿಶೀಲನೆ

ಮುಂಡರಗಿ ಪಟ್ಟಣದ ಮತಗಟ್ಟೆಗೆ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಡಿ.ಆರ್.ಪಾಟೀಲ ಅವರು ತಮ್ಮ ತಮ್ಮ ಕಾರ್ಯಕರ್ತರಿಂದ ಮತದಾನ ಕುರಿತು ಮಾಹಿತಿ ಪಡೆದರು.