ಸವದತ್ತಿ : ಮಹಾಮಾರಿ ಕೋವಿಡ್-19 ಹಾಗೂ ಲಾಕ್‌ಡೌನ್ ಮಧ್ಯೆಯೂ ಸುರಕ್ಷತಾ ಕ್ರಮದೊಂದಿಗೆ 49.61 ಕೋಟಿ ರೂ. ರೈತರ ಉತ್ಪನ್ನ ವಹಿವಾಟು ನಡೆಸಿ, ಕಳೆದ ಮೂರು ತಿಂಗಳಲ್ಲಿ ಸವದತ್ತಿ ಎಪಿಎಂಸಿ 74.42 ಲಕ್ಷ ರೂಪಾಯಿ ಶುಲ್ಕ ಸಂಗ್ರಹಿಸಿದೆ ಎಂದು ಸವದತ್ತಿ
ಎಪಿಎಂಸಿ ಅಧ್ಯಕ್ಷ ಜಗದೀಶ ಹಣಸಿ ಹೇಳಿದ್ದಾರೆ.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆ ಹಾಗೂ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಪ್ರಪಂಚವೇ ಕರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿದೆ. ರೈತರು ಬೆಳೆ ಸಾಗಣೆ ಮಾಡಲು ಮತ್ತು ಮಾರಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮಾನಿ ಪ್ರಯತ್ನದಿಂದ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ರೈತರಿಗೆ ಅಗತ್ಯ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಯಿತು. ಕೋವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಪಿಎಂಸಿಯಿಂದ ಶಾಸಕರ ಮೂಲಕ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದರು. ಸರ್ಕಾರದಿಂದ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಗೊಂಡ ಅಣ್ಣಪ್ಪ ನುಗ್ಗಾನಟ್ಟಿ, ಮಲ್ಲಿಕಾರ್ಜುನ ನರಗುಂದ, ಶೋಭಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಸನಾಯ್ಕ ಮಲ್ಲೂರ, ಪ್ರಭು ಪ್ರಭುನವರ, ಮೈನಾವತಿ ಪಾಟೀಲ, ಮಲ್ಲವ್ವ ಕಲ್ಲೊಳ್ಳಿ, ಚಂದ್ರಶೇಖರ ಅಳಗೋಡಿ, ಚಂದ್ರಶೇಖರ ಸವದತ್ತಿ, ರಾಮಚಂದ್ರ ಶೆಟ್ಟರ, ಮಹೇಶ ಮಟ್ಟಿ, ಎಂ.ವಿ.ಗದಗ, ಸಿ.ವಿ.ದಾಸರ, ಪ್ರವೀಣ ಅಂಗಡಿ ಇದ್ದರು.