ಜಿಲ್ಲೆ

72 ಸಾವಿರ ಹೆಕ್ಟೇರ್ ಕಂದಾಯ ಭೂಮಿ ಒತ್ತುವರಿ

ಚಿತ್ರದುರ್ಗ: ಜಿಲ್ಲೆಯಲ್ಲಿ 7,70,702 ಹೆಕ್ಟೇರ್ ವಿಶಾಲ ಪ್ರದೇಶದಲ್ಲಿ, 2,06,594 ಹೆಕ್ಟೇರ್ ಭೂಮಿ ಕಂದಾಯ ಇಲಾಖೆ ಸುಪರ್ದಿಯಲ್ಲಿದೆ. ಇದರಲ್ಲಿ 72,000 ಹೆಕ್ಟೇರ್‌ನಷ್ಟು ಒತ್ತುವರಿಯಾಗಿರುವ ಮಾಹಿತಿ ಇದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಭೂ ಕಬಳಿಕೆ ನಿಷೇಧ ಕಾಯ್ದೆ ಕುರಿತು ಶನಿವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿ, ಕಂದಾಯ ಭೂಮಿ ಒತ್ತುವರಿ ಸಂಬಂಧ ಫಾರಂ 50, 53 ಹಾಗೂ 57 ಅಡಿ ಭೂಮಿ ಮಂಜೂರಿಗೆ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ ಎಂದರು.

ಹಿಂದುಳಿದ ಈ ಜಿಲ್ಲೆಯಲ್ಲಿ 3 ಎಕರೆಗಿಂತ ಕಡಿಮೆ ಜಾಗ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡುವುದರಿಂದ ಜೀವನಾಧಾರಕ್ಕೆ ಹಲವರಿಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ತೆರವುಗೊಳಿಸಿರಲಿಕ್ಕಿಲ್ಲ. ಈ ಎಲ್ಲ ಅಂಶಗಳ ಹೊರತಾಗಿಯೂ ಒತ್ತುವರಿಯಾದ 72ಸಾವಿರ ಹೆಕ್ಟೇರ್ ಪೈಕಿ 15ಸಾವಿರ ಹೆಕ್ಟೇರ್‌ನಷ್ಟು ತೆರವುಗೊಳಿಸಿ, ಸರ್ಕಾರಿ ಸುಪರ್ದಿಗೆ ಮರಳಿ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ ಹೊರತಾಗಿ ಅರಣ್ಯ, ಮುಜುರಾಯಿ, ಸ್ಮಶಾನ, ಕೆರೆ ಒತ್ತುವರಿ ಪ್ರಕರಣಗಳು ಜಿಲ್ಲೆಯಲ್ಲಿವೆ. ವಿಶೇಷ ಭೂ ಕಬಳಿಕೆ ನಿಷೇಧ ನ್ಯಾಯಾಲಯ, ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಲಯಗಳ ಆದೇಶವಿದ್ದರೂ, ಕೆರೆ ಒತ್ತುವರಿ ಪೂರ್ಣ ಪ್ರಮಾಣದಲ್ಲಿ ತೆರವು ಆಗಿಲ್ಲ ಎಂದು ಬೇಸರಿಸಿದರು.

ಜಿಲ್ಲೆಯಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆ. ಅಂತರ್ಜಲ ಮಟ್ಟ ಕೂಡ ಕುಸಿದಿದೆ. ಸಣ್ಣ ನೀರಾವರಿ, ಜಲಾನಯನ ಸೇರಿ ಕೆಎಂಇಆರ್‌ಸಿ ಹಾಗೂ ಡಿಎಂಎಫ್ ನಿಧಿಗಳಡಿ ಸಾವಿರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ದುರಂತವೆಂದರೆ ಈ ಜಲಮೂಲಗಳ ಸಂಗ್ರಹಕ್ಕೆ ಬೇಕಾದ ಕೆರೆಗಳೂ ಒತ್ತುವರಿಯಾಗಿವೆ. ಇದರಿಂದ ಹಣವೂ ವ್ಯರ್ಥವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ನಗರದ ಮೂಲ ಭೂ ನಕ್ಷೆಯಲ್ಲಿ ನಗರದ ಪ್ರಮುಖ ರಸ್ತೆಗಳು ಈಗಿರುವ ವಿಸ್ತೀರ್ಣದ ನಾಲ್ಕರಷ್ಟು ಅಗಲವಾಗಿವೆ. ಆದರೆ, ಒತ್ತುವರಿಯಿಂದಾಗಿ ಕಿರಿದಾಗಿವೆ. ಭೂ ಕಬಳಿಕೆ, ಅಧಿಕಾರಿಗಳ ನಿರ್ಲಕ್ಷವೂ ಇದಕ್ಕೆ ಕಾರಣ. ಇನ್ನೂ ಒತ್ತುವರಿ ತೆರವುಗೊಳಿಸದೆ, ಅವುಗಳಿಗೆ ಖಾತೆ ಮಾಡಿಕೊಡಲಾಗಿದೆ. ಹೀಗಾಗಿ ಒತ್ತುವರಿದಾರರು ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿದ್ದಾರೆ. ನಯಾಪೈಸೆ ಪರಿಹಾರ ನೀಡದೆ ತೆರವಿಗೆ ಕ್ರಮವಹಿಸಬಹುದು. ಈಗಾಗಲೇ ಚಳ್ಳಕೆರೆ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು.