ಜಿಲ್ಲೆ

ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ

ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ ಇಳಿಮುಖವಾಗಿದೆ. ಭಾನುವಾರದ 26 ಜನರಿಗೆ ರೋಗ ತಗುಲಿದ್ದು, 72 ಜನ ಗುಣ ಹೊಂದಿದ್ದಾರೆ.

ಕಾರವಾರದಲ್ಲಿ 5, ಅಂಕೋಲಾ ಹಾಗೂ ಭಟ್ಕಳದಲ್ಲಿ ತಲಾ 4, ಯಲ್ಲಾಪುರ ಹಾಗೂ ಮುಂಡಗೋಡಿನಲ್ಲಿ ಹಳಿಯಾಳ ಹಾಗೂ ಸಿದ್ದಾಪುರದಲ್ಲಿ ತಲಾ 1 ಪ್ರಕರಣಗಳು ಖಚಿತವಾಗಿವೆ.

ಕಾರವಾರದಲ್ಲಿ 9, ಕುಮಟಾ, ಹೊನ್ನಾವರ, ಭಟ್ಕಳ ಯಲ್ಲಾಪುರದಲ್ಲಿ ತಲಾ ಒಬ್ಬ, ಹಳಿಯಾಳದಲ್ಲಿ 43, ಶಿರಸಿಯಲ್ಲಿ 16 ಜನರು ಸೋಂಕಿನಿಂದ ಮುಕ್ತರಾಗಿದ್ದಾರೆ.

ಹೊಸ ಸೋಂಕಿತರದಲ್ಲಿ 14 ಜನರಿಗೆ ರೋಗಿಗಳ ಸಂಪರ್ಕದಿಂದ ಬಂದಿದೆ. 10 ಜನರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಹೊರ ಊರಿನಿಂದ ಬಂದ ಇಬ್ಬರಲ್ಲಿ ರೋಗ ಪತ್ತೆಯಾಗಿದೆ. ಒಟ್ಟಾರೆ ಕರೊನಾಕ್ಕೆ ತುತ್ತಾದವರಲ್ಲಿ ಇಬ್ಬರು ಮಕ್ಕಳು, ನಾಲ್ವರು ವೃದ್ಧರಿದ್ದಾರೆ.

ಆತಂಕ ಬೇಡ ನಿಯಂತ್ರಣದಲ್ಲಿದೆ ಕರೊನಾ: ಕರೊನಾದ ಭಯದ ನಡುವೆ ಸಮಾಧಾನದ ಅಂಶವೂ ಇದೆ. ರಾಜ್ಯ ಕರೊನಾ ವಾರ್ ರೂಂ ಮಾಹಿತಿಯಂತೆ ಜಿಲ್ಲೆಯಲ್ಲಿ ಕರೊನಾ ಬೆಳವಣಿಗೆ ಪ್ರಮಾಣ ಕಳೆದ ಐದು ದಿನಗಳಲ್ಲಿ ಶೇ. 5.9 ರಷ್ಟಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ 19 ನೇ ಸ್ಥಾನದಲ್ಲಿದೆ. ಮರಣ ಪ್ರಮಾಣ ಶೇ. 1 ರಷ್ಟು ಮಾತ್ರ. ಇದರಿಂದ ಜನ ಆತಂಕಪಡುವ ಅವಶ್ಯಕತೆಯೇ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. 11 ದಿನದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ಇನ್ನು ಸೋಂಕು ತಗುಲಿದ ಶೇ. 88.6 ರಷ್ಟು ಜನರು ರೋಗ ಲಕ್ಷಣ ರಹಿತರಾಗಿದ್ದಾರೆ. ಅವರು ಇನ್ನೊಬ್ಬರಿಗೆ ಹರಡುವ ಪ್ರಮಾಣ ಅತಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಪ್ರತಿ ದಿನ 590 ಜನರ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಬೇಕು ಎಂದು ರಾಜ್ಯ ಸರ್ಕಾರ ಗುರಿ ನಿಗದಿ ಮಾಡಿದೆ. ಶೇ. 17 ರಷ್ಟು ಹೆಚ್ಚು ಜನರ ಗಂಟಲ ದ್ರವದ ಮಾದರಿ ಪರೀಕ್ಷಿಸಲಾಗುತ್ತಿದೆ. 1 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಇದುವರೆಗೆ 5278 ಜನರ ಗಂಟಲ ದ್ರವ ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಬಿಟ್ಟರೆ ಉತ್ತರ ಕನ್ನಡ ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಗಂಟಲ ದ್ರವ ಪರೀಕ್ಷೆ ನಡೆದಿದೆ. ಒಟ್ಟು ಗಂಟಲ ದ್ರವ ಪರೀಕ್ಷೆ ಮಾಡಿದರೆ ಅದರಲ್ಲಿ ಪಾಸಿಟಿವ್ ಮಾದರಿಗಳ ಪ್ರಮಾಣ ಶೇ. 12 ರಷ್ಟಿದೆ.

ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಅತ್ಯಂತ ಆಪತ್ತಿನ ಪರಿಸ್ಥಿತಿಯಲ್ಲಿದ್ದ ಕರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಕಾರವಾರ ಕ್ರಿಮ್್ಸ ವೈದ್ಯರು ತಾಯಿ ಹಾಗೂ ಮಗುವನ್ನು ಬದುಕಿಸಿದ್ದಾರೆ.

ದಾಂಡೇಲಿಯ ಕರೊನಾ ಸೋಂಕಿತ ಗರ್ಣಿಣಿಯನ್ನು ಕ್ರಿಮ್ಸ್​ಗೆ ರವಾನಿಸಲಾಗಿತ್ತು. ಬರುವಾಗ ಆಕೆಯ ಗರ್ಭಕೋಶ ಒಡೆದು ಹೋಗಿತ್ತು. ಕರುಳ ಬಳ್ಳಿ ಮಗುವಿನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಮಗು ಹಾಗೂ ತಾಯಿಯ ಜೀವ ಅಪಾಯದಲ್ಲಿತ್ತು.

ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್, ಡಾ.ಪೂಜಾ, ಡಾ.ಎಸ್.ಬಿ.ಕಡೂರ್, ಡಾ.ವಿಶ್ವನಾಥ ಶುಶ್ರೂಶಕಿ ಬಿ.ಎಸ್.ಗೌರಿ, ಶ್ರೀಶಾ, ಒಟಿ ಸಹಾಯಕ ಪ್ರವೀಣ ಅವರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಇಬ್ಬರನ್ನೂ ರಕ್ಷಿಸಿದೆ. ವೈದ್ಯಕೀಯ ತಂಡದ ಕಾರ್ಯಕ್ಕೆ ಡೀನ್ ಡಾ. ಗಜಾನನ ನಾಯಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.