ಜಿಲ್ಲೆ

ಬಿಡಿಸಿಸಿ ಕದನದಲ್ಲಿ 72 ನಾಮಪತ್ರ ಕ್ರಮಬದ್ಧ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ:  ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​(ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಸಲ್ಲಿಕೆಯಾಗಿರುವ ಎಲ್ಲ ನಾಮಪತ್ರ ಕ್ರಮಬದ್ಧವಾಗಿದ್ದು, ಯಾವೊಂದು ನಾಮಪತ್ರವೂ ತಿರಸತಗೊಂಡಿಲ್ಲ ಎಂದು ಚುನಾವಣಾಧಿಕಾರಿ ಶ್ರವಣಕುಮಾರ ನಾಯ್ಕ ತಿಳಿಸಿದರು.

ಶನಿವಾರದವರಗೆ 16 ಸ್ಥಾನಗಳಿಗಾಗಿ ಒಟ್ಟು 43 ಅಭ್ಯರ್ಥಿಗಳಿಂದ 72 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಭಾನುವಾರ ಕೈಗೊಂಡ ಪರಿಶೀಲನಾ ಕಾರ್ಯದಲ್ಲಿ ಎಲ್ಲ ನಾಮಪತ್ರ ಕ್ರಮಬದ್ಧವಾಗಿವೆ. ಯಾವುದೇ ನಾಮಪತ್ರ ತಿರಸತವಾಗಿಲ್ಲ. ನಾಮಪತ್ರ ವಾಪಸ್​ ಪಡೆಯಲು ಸೋಮವಾರ ಮಧ್ಯಾಹ್ನ 3ರ ವರೆಗೆ ಸಮಯಾವಕಾಶವಿದೆ ಎಂದು ತಿಳಿಸಿದ್ದಾರೆ.

ರಣಕಣ ಇಂದು ಫೈನಲ್​: ಈಗಾಗಲೇ ನಾಲ್ಕು ನಿರ್ದೇಶಕ ಸ್ಥಾನಗಳಲ್ಲಿ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆ ಸ್ಪಷ್ಟವಾಗಿದೆ. ಉಳಿದ 12 ಸ್ಥಾನಗಳಲ್ಲಿ ಅಂತಿಮವಾಗಿ ಯಾರೆಲ್ಲ ಕಣದಲ್ಲಿ ಉಳಿಯುತ್ತಾರೆ ಎನ್ನುವುದು ಸೋಮವಾರ ಮಧ್ಯಾಹ್ನ 3ರ ಬಳಿಕ ಗೊತ್ತಾಗಲಿದೆ. ರಾಯಬಾಗ, ರಾಮದುರ್ಗ ಹಾಗೂ ಇತರೆ ಕ್ಷೇತ್ರದಲ್ಲಿ 3ಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹುಕ್ಕೇರಿ, ಖಾನಾಪುರ, ಬೈಲಹೊಂಗಲ, ಕಿತ್ತೂರು, ಅಥಣಿ ಕ್ಷೇತ್ರದಲ್ಲಿ ಮೂವರಿದ್ದಾರೆ. ಈ ಕ್ಷೇತ್ರಗಳಲ್ಲಿ ಯಾರಾದರೂ ಒಬ್ಬರು ನಾಮಪತ್ರ ವಾಪಸ್​ ಪಡೆದುಕೊಂಡಲ್ಲಿ ನೇರಾ ನೇರ ಸ್ಪರ್ಧೆ, ಇಲ್ಲವೇ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ ಜಾರಕಿಹೊಳಿ ಕ್ಷೇತ್ರದಲ್ಲಿ ಇನ್ನೊಬ್ಬರು ನಾಮಪತ್ರ ಸಲ್ಲಿಸಿದ್ದು, ಅವರು ಯಾರ ಬೆಂಬಲಿಗರು? ಸ್ಪರ್ಧೆಯಲ್ಲಿ ಉಳಿಯುತ್ತಾರಾ? ಎನ್ನುವುದು ಸ್ಪಷ್ಟವಾಗಿಲ್ಲ.

ಹುಕ್ಕೇರಿ ಕ್ಷೇತ್ರದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಜತೆಗೆ ಪುತ್ರ ಕುಶ ಕತ್ತಿ ಸಹ ನಾಮಪತ್ರ ಸಲ್ಲಿಸಿದ್ದಾರೆ. ಕುಶ ವಾಪಸ್​ ಪಡೆದುಕೊಳ್ಳುವ ಸಾಧ್ಯತೆಯಿದ್ದು, ಜಾರಕಿಹೊಳಿ ಬಣದ ರಾಜೇಂದ್ರ ಪಾಟೀಲ ವಿರುದ್ಧ ನೇರಾ ನೇರ ಹಣಾಹಣಿಯಾಗಲಿದೆ. ನಿಪ್ಪಾಣಿ ಕ್ಷೇತ್ರದಲ್ಲಿ ಉತ್ತಮ ಪಾಟೀಲ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕಾಗವಾಡ ಕ್ಷೇತ್ರದಲ್ಲಿ ಶಾಸಕ ರಾಜು ಕಾಗೆ, ಶ್ರೀನಿವಾಸ ಪಾಟೀಲ ಮಧ್ಯೆ ನೇರ ಪೈಪೋಟಿ ಸಾಧ್ಯತೆಯಿದೆ.