ಜಿಲ್ಲೆ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 70,599 ಪ್ರಕರಣ ಇತ್ಯರ್ಥ

ಮಂಜುನಾಥ ಅಂಗಡಿ

ಧಾರವಾಡ: ಜಿಲ್ಲೆಯಲ್ಲಿ ಸೆ. 9ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 70,599 ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡಿಸಲಾಯಿತು. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿವಾಹ ವಿಚ್ಛೇಧನ ಬಯಸಿ ಅರ್ಜಿ ಸಲ್ಲಿಸಿದ್ದ 19 ಜೋಡಿ ದಂಪತಿಯನ್ನು ರಾಜಿ ಮಾಡಿಸಿ ಒಂದುಗೂಡಿಸುವಲ್ಲಿ ಅದಾಲತ್ ಯಶಸ್ವಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ತಿಳಿಸಿದ್ದಾರೆ.
ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡದಲ್ಲಿ 15 ಪೀಠ, ಹುಬ್ಬಳ್ಳಿಯಲ್ಲಿ 18, ಕುಂದಗೋಳ 2, ನವಲಗುಂದ 2, ಕಲಘಟಗಿಯಲ್ಲಿ 2 ಸೇರಿ 39 ಪೀಠಗಳನ್ನು ಸ್ಥಾಪಿಸಲಾಗಿತ್ತು.
ಧಾರವಾಡದ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿ.ಜೆ.ಎಂ. ನ್ಯಾಯಾಧೀಶ ಸಂಜಯ ಪಿ. ಗುಡಗುಡಿ ಮತ್ತು ಸಂಧಾನಕಾರ ಬಿ.ಡಿ. ನರಸಗೌಡ ಅವರನ್ನೊಳಗೊಂಡ ಪೀಠದ ಬೈಠಕ್‌ನಲ್ಲಿ 96 ವರ್ಷದ ಹಿರಿಯ ನಾಗರಿಕ ಬಸನಗೌಡ ಯಲ್ಲಪ್ಪಗೌಡ ಮರಿಯಪ್ಪಗೌಡ ಅವರು, ವಿಭಾಗದ ದಾವೆಯಲ್ಲಿ ತಮ್ಮ ಆಸ್ತಿಯನ್ನು ಮಗನಿಗೆ ಸಂತೋಷದಿಂದ ಬಿಟ್ಟು ಕೊಡುವ ಮೂಲಕ ದೊಡ್ಡತನ ಮೆರೆದು ಕುಟುಂಬದವರೆಲ್ಲರ ಗೌರವಕ್ಕೆ ಪಾತ್ರರಾದರು.
ಧಾರವಾಡದ 3ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ ಮತ್ತು ಸಂಧಾನಕಾರ ಗಿರೀಶಕುಮಾರ ಕನಸೋಗಿ ಅವರನ್ನೊಳಗೊಂಡ ಪೀಠದ ಬೈಠಕ್‌ನಲ್ಲಿ ಧಾರವಾಡ ಲೈನ್‌ಬಜಾರ್‌ನ ಹನುಮಂತ ದೇವಸ್ಥಾನದ ವ್ಯಾಜ್ಯವನ್ನು ಕಕ್ಷಿದಾರರು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡರು. ಪಾಳೆಪ್ರಕಾರ ದೇವಸ್ಥಾನದ ಪೂಜೆ ಮಾಡಲು ಸಂತೋಷದಿಂದ ಒಪ್ಪಿಕೊಂಡರು.