ಜಿಲ್ಲೆ

700 ಲೀ. ಹಾಲಿನಲ್ಲಿ ಈಶ್ವರನಿಗೆ ಅಭಿಷೇಕ

ಕೊಳ್ಳೇಗಾಲ: ಮಹಾಶಿವರಾತ್ರಿ ಪ್ರಯುಕ್ತ ಮುಜರಾಯಿ ಇಲಾಖೆಗೆ ಸೇರಿದ ಶ್ರೀಮರಳೇಶ್ವರಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರ ವೇರಿದ್ದು. ಈಶ್ವರಿಗೆ 700 ಲೀ. ಹಾಲಿನಲ್ಲಿ ಅಭಿಷೇಕ ಮಾಡಲಾಯಿತು. ತಡರಾತ್ರಿವರೆವಿಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು.

ಬೆಳಗಿನ ಜಾವಾ 4 ಗಂಟೆಗೆ ದೇವಾಲಯ ಈಶ್ವರನಿಗೆ ಹಾಲಿನ ಅಭಿಷೇಕ ಹಾಗೂ ಪೂಜಾ ಕಾರ್ಯಗಳು ಆರಂಭಗೊಂಡವು. ಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ಅಭಿಷೇಕ ಮಾಡುವುದನ್ನು ಕಣ್ತುಂಬಿಕೊಂಡರು. ಭಕ್ತರಿಗೆ ಅಭಿಷೇಕದ ಹಾಲನ್ನು ಪ್ರಸಾದವಾಗಿ ನೀಡಲಾಯಿತು. ಸಂಜೆ 6 ಗಂಟೆಯಾಗುತ್ತಿದಂತೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ತಡರಾತ್ರಿವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಪೂಜಾ ಕೈಂಕರ್ಯ ಡಾ.ಎನ್.ನಾಗೇಂದ್ರಭಟ್ ನೇತೃತ್ವದಲ್ಲಿ ನೆರವೇರಿತು. ಮಧ್ಯರಾತ್ರಿ 1 ಗಂಟೆ ಸಂದರ್ಭದಲ್ಲಿ ದೇವರ ದರ್ಶನ ಕಾರ್ಯಕ್ರಮದಡಿ ಪಂಚಾಮೃತ ರುದ್ರಾಭಿಷೇಕ, ಏಕಾದಶ ರುದ್ರಾಭಿಷೇಕ, ಅರ್ಚನೆ ಇತರ ಪೂಜೆಗಳ ಜರುಗಿದವು.

ವಿವಿವಿಧೆಡೆ ಪೂಜೆ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಎಲ್ಲ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಪಟ್ಟಣದ ಶ್ರೀಕಾಶಿ ವಿಶ್ವನಾಥ ದೇವಾಲಯ, ಶಿವನಸಮುದ್ರದ ಸೋಮೇಶ್ವರ ದೇವಾಲಯ ಹೀಗೆ ಇನ್ನಿತರ ಶಿವನ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಶಿವನ ಆರಾಧನೆ ಮಾಡಲಾಯಿತು.