ಜಿಲ್ಲೆ

ಎರಡೇ ರಸ್ತೆಯಲ್ಲಿ 700 ಹೂ ಕುಂಡಗಳು ಹಾಳು!

ಜಗದೀಶ ಹೊಂಬಳಿ

ಜಗದೀಶ ಹೊಂಬಳಿ ಬೆಳಗಾವಿ
ಅಧಿಕಾರಿಗಳು ಬೇಜವಾಬ್ದಾರಿ, ನಿಷ್ಕಾಳಜಿ ವಹಿಸಿದರೆ ಯೋಜನೆಗಳು ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ಸ್ಮಾರ್ಟ್‌ಸಿಟಿಯಿಂದ ನಗರದಲ್ಲಿ ಅಳವಡಿಸಿದ ಸಾವಿರಾರು ಹೂ ಕುಂಡಗಳ ಅವ್ಯವಸ್ಥೆಯೇ ಸಾಕ್ಷಿಯಾಗಿದೆ.
 ನಗರದ ಸೌಂದರ್ಯಿಕರಣ, ಪರಿಸರ ಬೆಳೆಸುವ ದೃಷ್ಟಿಯಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಅಳವಡಿಸಿದ್ದ ಹೂ ಕುಂಡಗಳು ಕೆಲವೇ ತಿಂಗಳಲ್ಲಿ ನಿರ್ವಹಣೆ ಇಲ್ಲದೇ ಹಾಳಾಗಿವೆ. ಕುಂಡಗಳಲ್ಲಿನ ಸಸಿಗಳೂ ಒಣಗಿ ಹೋಗಿದ್ದು, ಖಾಲಿ ಕುಂಡಗಳು ಈಗ ಕಸದ ತೊಟ್ಟಿಯಾಗಿ ಮಾರ್ಪಟ್ಟಿವೆ. ಅಂಗಡಿ, ಮುಂಗಟ್ಟು, ಹೋಟೆಲ್, ಪಾನ್‌ಶಾಪ್ ಪ್ರದೇಶಗಳಲ್ಲಿ ಅಳವಡಿಸಿರುವ ಕುಂಡಗಳು ಎಲೆ-ಅಡಕೆ, ಗುಟಕಾ ಜಗಿದು ಉಗುಳುವ ಡಬ್ಬಿಗಳಾಗಿವೆ. ರಸ್ತೆ ಪಕ್ಕದ ಮನೆಗಳ ಜನರು ಕಸವನ್ನು ಕುಂಡಗಳಲ್ಲಿ ಚೆಲ್ಲುತಿದ್ದಾರೆ. ಇದರಿಂದ ನಗರದ ಸೌಂದರ್ಯ ಹೆಚ್ಚಿಸಬೇಕಿದ್ದ ಕುಂಡಗಳು ಸ್ಮಾರ್ಟ್‌ಸಿಟಿಗೆ ಕಪ್ಪು ಚುಕ್ಕೆಯಾಗಿವೆ. ಈ ಯೋಜನೆಗೆ ಕೋಟ್ಯಂತರ ರೂ. ಖರ್ಚು ಮಾಡಿದ ಉದ್ದೇಶವಾದರೂ ಏನು ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
 ಅವನತಿ ಹಾದಿಯಲ್ಲಿ 700 ಕುಂಡಗಳು:
 ಒಂದು ಸಸಿ ಕುಂಡಕ್ಕೆ 1,550 ರೂ. ವೆಚ್ಚ ಮಾಡಲಾಗಿದೆ. ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿಯ ಪ್ಯಾಕೇಜ್ ನಂ.2ರಲ್ಲಿ ಶ್ರೀನಗರ ಹಾಗೂ ಆಂಜನೇಯ ನಗರ ಇವೆರಡೇ ರಸ್ತೆಗಳ ಬದಿ 700 ಹೂ ಕುಂಡಗಳನ್ನು ಅಳವಡಿಸಲಾಗಿದ್ದು, ಎಲ್ಲ ಕುಂಡಗಳು ಹಾಳಾಗಿವೆ. ಮೊದಲ ಪ್ಯಾಕೇಜ್ ಕಾಮಗಾರಿಯಲ್ಲೂ ಸಾವಿರಾರು ಕುಂಡಗಳನ್ನು ಅಳವಡಿಸಿದ್ದು, ಎಲ್ಲ ಸಸಿಗಳು ಒಣಗಿ, ಅವನತಿ ಹೊಂದುತ್ತಿವೆ. ರಸ್ತೆ ನಿರ್ಮಾಣ ಯೋಜನೆಯಡಿ ಕುಂಡಗಳನ್ನು ಅಳವಡಿಸಲಾಗಿದೆ. ಶ್ರೀನಗರದಲ್ಲಿ 1.9 ಕಿ.ಮೀ. ಹಾಗೂ ಆಂಜನೇಯ ನಗರದಲ್ಲಿ 1.6 ಕಿ.ಮೀ. ರಸ್ತೆ ನಿರ್ಮಿಸಿದ್ದಾರೆ. ಇಷ್ಟು ರಸ್ತೆ ನಿರ್ಮಿಸುವುದಕ್ಕೆ 43 ಕೋಟಿ ರೂ. ಖರ್ಚು ಮಾಡಿದ್ದು, ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.
 ಎಲ್ಲೆಲ್ಲಿ ಹಾಳಾಗಿವೆ:
 ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಹಾನಗರ ಪಾಲಿಕೆಗೆ ಹೋಗುವ ರಸ್ತೆ, ಧರ್ಮನಾಥ ಭವನ ರಸ್ತೆ, ಶ್ರೀನಗರ, ಟಿಳಕವಾಡಿ, ಅಶೋಕ ನಗರ ರಸ್ತೆ, ಕೆಪಿಟಿಸಿಎಲ್ ರಸ್ತೆ ಸೇರಿ ಹಲವಾರು ಕಡೆಗಳಲ್ಲಿ ಸಸಿ ಕುಂಡಗಳು ಹಾಳಾಗಿವೆ. ಕೆಲವೇ ತಿಂಗಳಲ್ಲಿ ಹಾಳಾಗಿವೆ. ರಸ್ತೆ ಪಕ್ಕದಲ್ಲಿ ಕುಂಡಗಳನ್ನು ಅಳವಡಿಸುವ ಕಾಮಗಾರಿ ಮುಗಿದ ಬಳಿಕ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿಲ್ಲ. ಹೀಗಾಗಿ ಪಾಲಿಕೆ ಅಧಿಕಾರಿಗಳು ನಿರ್ವಹಣೆ ಗೋಜಿಗೆ ಹೋಗಿಲ್ಲ. ಹಳೇ ಪೊಲೀಸ್ ಆಯುಕ್ತರ ಕಚೇರಿ ಎದುರಿನ ಹೂ ಕುಂಡಗಳು ಮಾಯವಾಗಿವೆ. ಶ್ರೀನಗರದಲ್ಲಿ ದೊಡ್ಡ ಗಾರ್ಡನ್ ಇದೆ. ಪಾಲಿಕೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಆ ಪ್ರದೇಶದ ಕುಂಡಗಳೇ ನಿರ್ವಹಣೆ ಇಲ್ಲದ ಕಾರಣ ಅವು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಕುಂಡಗಳಲ್ಲಿ ಕಸ ಬೆಳೆಯುತ್ತಿದೆ. ಕೆಲವರು ತಮ್ಮ ಮನೆಗಳ ಅಂಧ ಹೆಚ್ಚಿಕೊಳ್ಳಲು ಇಟ್ಟುಕೊಂಡಿದ್ದಾರೆ. ಕೆಲವನ್ನು ಕಳ್ಳತನ ಮಾಡಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಒಂದು ಕಡೆ ಪರಿಸರ ಜಾಗೃತಿ ಮೂಡಿಸುವ ಅಧಿಕಾರಿಗಳು, ಇಂತಹದ್ದೊಂದು ಯೋಜನೆ ಹಳ್ಳ ಹಿಡಿಯುವುದಕ್ಕೆ ಕಾರಣವಾಗಿದ್ದಾರೆ. ಪರಿಸರ ಹೆಸರಿನಲ್ಲಿ ಹಣ ಪೋಲಾಗಿದೆ.
 ಅಧಿಕಾರಿ ಪ್ರತಿಕ್ರಿಯೆ: ಸ್ಮಾರ್ಟ್‌ಸಿಟಿಯಿಂದ ನಿರ್ಮಿಸಿದ ಕುಂಡಗಳಲ್ಲಿ ಹೊಸ ಸಸಿ ಬೆಳೆಸಲು ಕ್ರಮ ವಹಿಸಲಾಗುವುದು. ಸ್ಮಾರ್ಟ್‌ಸಿಟಿಯಿಂದ ಕಾಮಗಾರಿಯು ಪಾಲಿಕೆ ಹಸ್ತಾಂತರ ಮಾಡಿದ ಬಳಿಕ ಅಗತ್ಯ ರಿಪೇರಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಪ್ರತಿಕ್ರಿಯಿಸಿದರು.