ಜಿಲ್ಲೆ

70 ಸಾವಿರ ತಾಳೆಗರಿಯ ಹಸ್ತಪ್ರತಿಗಳ ಸಂರಕ್ಷಣೆ

ಮೈಸೂರು: ಹಳೆಯ ಕಾಲದ 70 ಸಾವಿರ ತಾಳೆಗರಿಯ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡಿ ಡಿಜಿಟಲೀಕರಣ ಮಾಡುವ ಕಾರ್ಯ ಫೆಬ್ರವರಿಯಿಂದ ನಡೆಯುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ತಿಳಿಸಿದರು.


ಮೈವಿವಿ ಮತ್ತು ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಗುರುವಾರ ಆಯೋಜಿಸಿದ್ದ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಪ್ರದೂಮೀಕರಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಹಸ್ತಪ್ರತಿಗಳ ಸಂರಕ್ಷಣೆ ನುರಿತ ತಜ್ಞರ ಸಲಹೆ, ಸಹಕಾರದೊಂದಿಗೆ ತಾಳೆಗರಿಗಳ ಶುದ್ಧೀಕರಣ, ರಾಸಾಯನಿಕ ಬಳಕೆ, ಸಿಟ್ರೋನೆಲ್ಲಾ ಎಣ್ಣೆಯ ಲೇಪನ ನಂತರ ಕೊನೆಯದಾಗಿ ಗಂಜಿ ಮುಕ್ತ ಕೆಂಪುಬಟ್ಟೆಯಲ್ಲಿ ಸುತ್ತಿಡಲಾಗುತ್ತದೆ. ಇದರ ಜತೆಗೆ ಡಿಜಿಟಲೀಕರಣ ನಡೆಯಲಿದೆ. ಇದಕ್ಕಾಗಿ ದಿ ಮಿಥಿಕ್ ಸೊಸೈಟಿಯೊಂದಿಗೆ ಮೈವಿವಿ ಎರಡು ವರ್ಷ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಸಾಕಾಗುವುದಿಲ್ಲ. ಈ ಕೆಲಸವನ್ನು ಮುಗಿಸಲು ಕನಿಷ್ಠ 10 ವರ್ಷವಾಗಲಿದೆ. ಆದ್ದರಿಂದ ಒಡಂಬಡಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.


ಹಸ್ತಪ್ರತಿಗಳು ಬೌದ್ಧಿಕ ಆಸ್ತಿ. ಇದರಲ್ಲಿ ಜ್ಞಾನ ಭಂಡಾರವನ್ನು ತಂತ್ರಜ್ಞಾನ ಮೂಲಕ ಎಲ್ಲರಿಗೂ ಸಿಗುವಂತೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೆಲ ಸುರಕ್ಷತಾ ಕ್ರಮದೊಂದಿಗೆ ವೆಬ್‌ಸೈಟ್‌ನಲ್ಲಿ ಇದು ಸುಲಭವಾಗಿ ದೊರೆಯುವಂತೆ ಮಾಡಲಾಗುವುದು ಎಂದರು.


ಪ್ರಾಚ್ಯವಿದ್ಯಾ ಸಂಶೋಧನಾಲಯ ಮೈವಿವಿಗೆ ಹಳೆಯದು. ವಿವಿಗೆ 106 ವರ್ಷವಾಗಿದ್ದರೆ, ಇದಕ್ಕೆ 123 ವರ್ಷವಾಗಿದೆ. ಹೀಗಾಗಿ, ಇದುವೇ ವಿವಿಗೆ ಬುನಾದಿ. ನ್ಯಾಕ್ ಸೇರಿದಂತೆ ಯಾವುದೇ ಸಮಿತಿಗಳು ಬಂದರೆ ಮೊದಲು ಇಲ್ಲಿಗೆ ಭೇಟಿ ನೀಡುತ್ತವೆ. ರ‌್ಯಾಂಕಿಂಗ್‌ನಲ್ಲಿ ಹೆಚ್ಚಿನ ಅಂಕ ದೊರೆಯಲು ಈ ಸಂಸ್ಥೆ ಅನುಕೂಲವಾಗಿದೆ. ಆದ್ದರಿಂದ ಈ ಸಂಸ್ಥೆ ವಿವಿಗೆ ಭೂಷಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಒಂದು ಕಾಲದಲ್ಲಿ ಮೈವಿವಿ ಕಾರ್ಯವ್ಯಾಪ್ತಿ 16 ಜಿಲ್ಲೆಯವರೆಗೂ ವಿಸ್ತಾರಗೊಂಡಿತ್ತು. ಪ್ರಸ್ತುತ 4 ಜಿಲ್ಲೆಗಳಲ್ಲಿ ವಿವಿ ಕಾರ್ಯಚಟುವಟಿಕೆ ಇದೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆಯಿಂದಾಗ ಮೈವಿವಿ ಒಂದು ಜಿಲ್ಲೆಗೆ ಮಾತ್ರ ಸೀಮಿತಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮಾದರಿ ವಿವಿಯಾಗಿ ರೂಪಿಸುವ ಅವಕಾಶವಿದೆ ಎಂದರು.


ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್‌ಇಪಿ) ಬಹಳಷ್ಟು ಜನರಿಗೆ ಇನ್ನೂ ಅರ್ಥವಾಗಿಲ್ಲ. ಇನ್ನೂ ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗಿಲ್ಲ. ಆದರೆ, ಇದು ಜನಪರ ನೀತಿ. ಭವಿಷ್ಯದಲ್ಲಿ ಭರವಸೆ, ಸುಧಾರಣೆಗೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.


ಕಲಿಕಾ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವೇ ಎಂಬ ಅನುಮಾನ ನನಗೂ ಇತ್ತು. ಎನ್‌ಇಪಿ ಇದನ್ನು ಸುಳ್ಳು ಮಾಡಿಸಿದೆ. ಬಿಗಿಯಾಗಿದ್ದ ಶಿಕ್ಷಣ ನೀತಿಯನ್ನು ಇದು ಸಡಿಲಗೊಳಿಸಿದೆ. ಪ್ರಗತಿಪರ, ಉದಾರವಾದ ಮತ್ತು ಕಲಿಕಾ ಪದ್ಧತಿಯಲ್ಲಿ ಬದಲಾವಣೆಗೆ ಕಾರಣವಾಗಿದೆ. ದೇಶದ ಸುಸ್ಥಿರ ಅಭಿವೃದ್ಧಿಗೂ ಅನುಕೂಲಕರವಾಗಿದೆ. ದಕ್ಷಿಣ ಭಾರತ ರಾಜ್ಯದಲ್ಲಿ ಕರ್ನಾಟಕ ಹಿಂದೆ ಉಳಿದಿದೆ. ಇದನ್ನು ಒಪ್ಪಿಕೊಳ್ಳಬೇಕಾಗಿದೆ. ರಾಜ್ಯವನ್ನು ಪ್ರಗತಿಶೀಲಗೊಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.


ಮುಖ್ಯಮಂತ್ರಿ ಸಲಹೆಗಾರ(ಇ-ಆಡಳಿತ) ಬೇಳೂರು ಸುದರ್ಶನ, ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ರಾಮಪ್ರಿಯ ಪಾಲ್ಗೊಂಡಿದ್ದರು.