ಚಿತ್ರದುರ್ಗ: 2 ಇನ್ನೋವಾ ಸೇರಿದಂತೆ 70 ಲಕ್ಷ ರೂ.ಅಧಿಕ ಬೆಲೆ ಬಾಳುವ 12 ಕಾರುಗಳನ್ನು ಮಾರಾಟ ಮಾಡಿದ್ದ ಚಾಲಕಿ ಚಾಲಕೊಬ್ಬ ಈಗ ಪೊಲೀಸರ ಅತಿಥಿ. ಸಾಲ ತೀರಿಸಲು, ಕಾರು ಮಾಲೀಕರಿಗೆ ಪ್ರತಿ ತಿಂಗಳು 25-30 ಸಾವಿರ ರೂ.ಬಾಡಿಗೆ ಕೊಡುವುದಾಗಿ ನಂಬಿಸಿ ವಂಚಿಸಿದ್ದ ಚಿತ್ರದುರ್ಗದ ಕವಾಡಿಗರ ಹಟ್ಟಿಯ ಮಧುಕುಮಾರ್(30)ಪೊಲೀಸರು ಬಂಧಿಸಿದ್ದಾರೆ.
ಕಾರು ಮಾಲೀಕರಿಂದ ಪಡೆದ ಕಾರುಗಳನ್ನು ಬೇರೆಯವರೆಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ, ದಾವಣಗೆರೆಯಲ್ಲಿ ವಂಚಿಸಿದ್ದ ಕಾರುಗಳನ್ನು ಚಿತ್ರದುರ್ಗದಲ್ಲಿ, ಚಿತ್ರದುರ್ಗದ ಕಾರುಗಳನ್ನು ದಾವಣಗೆರೆಯಲ್ಲಿ ಒಟ್ಟು 12.20 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ. ಕಾರು ಮಾರಲು ಇವರನು ಗ್ರಾಮೀಣರನ್ನು ಗುರಿಯಾಗಿಸಿ ಕೊಂಡಿರುತ್ತಿದ್ದ. ದಾಖಲೆಗಳು ತಮ್ಮ ಹೆಸರಿಗೆ ಆದ ಬಳಿಕ ಸಾಧ್ಯವಾದರೆ ಇನ್ನಷ್ಟು ಮೊತ್ತವನ್ನು ಕೊಡಿ ಎಂದು ಅವರನ್ನೂ ನಂಬಿಸುತ್ತಿದ್ದ ಎಂದು ಎಸ್‌ಪಿ ಜಿ.ರಾಧಿಕಾ ತಿಳಿಸಿದ್ದಾರೆ.
ಅಂತರ್‌ರಾಜ್ಯಕ್ಕೆ ಹೋಗಬೇಕೆಂದು ಮಾಲೀಕರಿಂದ ಆರ್‌ಸಿ ಮತ್ತಿತರ ದಾಖಲೆ ಪಡೆದು,ಫಾರಂ ನಂ 29,30ಕ್ಕೆ ಪೋರ್ಜರಿ ಸಹಿ ಮಾಡಿ ಖರೀದಿದಾರರಿಗೆ ತೋರಿಸುತ್ತಿದ್ದ. ಲಾಕ್‌ಡೌನ್ ಬಳಿಕ ಈತನ ವಂಚನೆಗೆ ಬಿದ್ದ ಕಾರು ಮಾಲೀಕರ ಸಂಖ್ಯೆ ಹೆಚ್ಚಾಗಿದ್ದು, ದಾವ ಣಗೆರೆ ಮೂಲದ ಕಾರು ಮಾಲೀಕ ಬಸವರಾಜಪ್ಪ, ಭರಮಸಾಗರ ಠಾಣೆಗೆ ಅ.31ರಂದು ದೂರು ನೀಡಿದ ಬಳಿಕ ಪ್ರಕರಣ ಬಯ ಲಾಗಿದೆ. 12 ಕಾರುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.
ಅಡಕೆ ಕಳ್ಳರ ಬಂಧನ : ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿ ವಿ.ಪಾಳ್ಯದಲ್ಲಿ 25 ಚೀಲ ಅಡಕೆ ಕದ್ದಿದ್ದ ಆರು ಆರೋಪಿಗಳ ಪೈಕಿ ಮುಖ್ಯಆರೋಪಿ ಧನಂಜಯ ಸಹಿತ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಭದ್ರಾವತಿಯ ಧನಂಜಯ,ಚಾಲಕ ಹರಿಕೃಷ್ಣನನ್ನು ಬಂಧಿಸಿ 5ಲಕ್ಷ ರೂ.ಮೌಲ್ಯದ 19 ಅಡಕೆ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಅಡಕೆ ವರ್ತಕರು,ಗುಜರಿ ವಸ್ತು ಖರೀದಿದಾರರ ನೆಪದಲ್ಲಿ ಕಳ್ಳತನದ ಸ್ಥಳಗಳನ್ನು ಮೊದಲೇ ಗುರುತಿಸುತ್ತಿದ್ದ ಆರೋಪಿಗಳು ಕದ್ದ ಮಾಲನ್ನು ತಮ್ಮದೇ ಆದ ಅಡಕೆ ಸಂಸ್ಕರಣಾ ಘಟಕ ಹಾಗೂ ಗೋದಾಮಿನಲ್ಲಿ ಇಟ್ಟು ಮಾರುತ್ತಿದ್ದರು. ಪ್ರಕರಣದಲ್ಲಿ ಇನ್ನು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲ ಆರೋಪಿಗಳ ಮೇಲೂ ಹತ್ತಾರು ಕಳವು ಪ್ರಕರಣಗಳಿವೆ ಎಂದು ಎಸ್ಪಿ ಹೇಳಿದರು.