ಲಿಂಗದಹಳ್ಳಿ: ತಿಗಡ ಮತ್ತು ನಂದಿಬಟ್ಟಲು ಗ್ರಾಮ ಪಂಚಾಯಿತಿಗಳ 70 ಫಲಾನುಭವಿಗಳಿಗೆ ವಿವಿಧ ಮಾಸಾಶನಗಳ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಅರ್ಹರ ಮನೆ ಬಾಗಿಲಿಗೆ ಬಂದು ಸವಲತ್ತು ತಲುಪಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್ ಹೇಳಿದರು.
ತಿಗಡ ಗ್ರಾಪಂನಲ್ಲಿ ವಿವಿಧ ಮಾಸಾಶನಗಳ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ತಿಗಡ ಮತ್ತು ನಂದಿಬಟ್ಟಲು ಗ್ರಾಪಂಗಳ ವ್ಯಾಪ್ತಿಯ ಬಹುತೇಕ ನಿವಾಸಿಗಳು ಅನಕ್ಷರಸ್ಥರಾಗಿದ್ದು, ಕಾಫಿ ತೋಟ, ಅಡಕೆ, ತೆಂಗಿನ ತೋಟ ಇತರ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ವಿವಿಧ ಮಾಸಾಶನಗಳನ್ನು ಮಾಡಿಸುವ ಸಲುವಾಗಿ ಕೂಲಿ ಕೆಲಸ ಬಿಟ್ಟು ಲಿಂಗದಹಳ್ಳಿ, ತರೀಕೆರೆಯ ಕಂದಾಯ ಇಲಾಖಾ ಕಚೇರಿಗಳಿಗೆ ಅಲೆದಾಡಬೇಕಿತ್ತು. ಇದನ್ನು ಗಮನಿಸಿ ಶಾಸಕ ಜಿ.ಎಚ್.ಶ್ರೀನಿವಾಸ್ ಜನ ಸಂಪರ್ಕ ಕಚೇರಿಯಿಂದ ಅರ್ಹರಿಗೆ ಸಂಧ್ಯಾ ಸುರಕ್ಷಾ, ವಿಧವಾ, ವಿಕಲಚೇತನ, ಮನಸ್ವಿನಿ ಸೇರಿದಂತೆ ವಿವಿಧ ಮಾಸಾಶನ ಕಲ್ಪಿಸಿದ್ದಾರೆ ಎಂದು ಹೇಳಿದರು.
ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಮಾತನಾಡಿ, ನಂದಿಬಟ್ಟಲು, ತಿಗಡ ಗ್ರಾಪಂಗಳ ವ್ಯಾಪ್ತಿಯಲ್ಲಿದ್ದ ಮಾಸಾಶನ ವಂಚಿತರ ಮನೆ ಬಾಗಿಲಿಗೆ ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಗತ್ಯ ದಾಖಲೆ ಪತ್ರಗಳನ್ನು ಮಾಡಿಸಿ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಬಾಕಿ ಉಳಿದಿರುವರ ದಾಖಲೆ ಪತ್ರಗಳು ಕೆಲ ತಾಂತ್ರಿಕ ಕಾರಣಗಳಿಂದ ನಿಧಾನಗತಿಯಲ್ಲಿ ಪ್ರಗತಿಯಲ್ಲಿದ್ದು, ಮುಂದಿನ ಕೆಲ ದಿನಗಳೊಳಗೆ ಎಲ್ಲ ಮಾಸಾಶನ ವಂಚಿತರಿಗೆ ಆದೇಶ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.
ತಿಗಡ ಗ್ರಾಪಂ ಅಧ್ಯಕ್ಷೆ ನೀಲಮ್ಮ ಸುಧೀರ್, ಮಾಜಿ ಅಧ್ಯಕ್ಷೆ ಶ್ರೀದೇವಿ ಸತೀಶ್, ಉಪಾಧ್ಯಕ್ಷ ಆರ್.ಮುರುಗ, ಸದಸ್ಯಎನ್.ಜಿ. ರಮೇಶ್, ಪಿಡಿಒ ಟಿ.ಶಿವಮೂರ್ತಿ, ಕಾರ್ಯದರ್ಶಿ ಗಂಗಣ್ಣ ಮತ್ತು ಸಿಬ್ಬಂದಿ, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಜೆ.ಭದ್ರೇಗೌಡ, ಸದಸ್ಯ ಎನ್.ಎ.ಕೃಷ್ಣನಾಯ್ಕ ಇದ್ದರು.