ಶಿರಸಿ: ಶೇ. 40ರ ಕಮಿಷನ್ ಸರ್ಕಾರ ಎಂದು ನಮ್ಮ ಮೇಲೆ ಆರೋಪಿಸಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೇವಲ ನಾಲ್ಕು ತಿಂಗಳಿನಲ್ಲೇ ಭ್ರಷ್ಟಾಚಾರ ಆರಂಭಿಸಿದೆ. ಈಗ ಶೇ. 70 ಭ್ರಷ್ಟಾಚಾರವನ್ನು ಕಾಂಗ್ರೆಸ್ ನಡೆಸಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ನಗರದ ಗಾಣಿಗರ ಕಲ್ಯಾಣಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಸದಸ್ಯತಾ ಅಭಿಯಾನ ಕಾರ್ಯಾಗಾರ, ನಗರಸಭೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನಾ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ದುರ್ಬಳಕೆಯ ಹಗರಣದ ಬಳಿಕ ಈಗ ಸಿದ್ದರಾಮಯ್ಯ ಅವರ ಖುರ್ಚಿ ಅಲುಗಾಡುತ್ತಿದೆ. ನಾವ್ಯಾರೂ ಅವರ ಖುರ್ಚಿ ಅಲುಗಾಡಿಸಿಲ್ಲ, ಅವರ ಪಕ್ಷದವರೇ ಆದ ಡಿ.ಕೆ. ಶಿವಕುಮಾರ ಮತ್ತು ಮಲ್ಲಿಕಾರ್ಜುನ ಖರ್ಗೆಯೇ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಈಗಾಗಲೇ ಒಬ್ಬ ಸಚಿವರ ತಲೆದಂಡ ಸಹ ಆಗಿದೆ ಎಂದರು.
ಬಿಜೆಪಿ ಪಕ್ಷ ಜನಸಂಘವಾಗಿದ್ದ ಕಾಲದಿಂದಲೇ ಸಂಘಟಕರಿಗೆ ಶಕ್ತಿ ತುಂಬುವ ಕಾರ್ಯದ ಮೂಲಕವೇ ಬೆಳೆದುಬಂದಿದೆ. ಈಗ ವಿಶ್ವದಲ್ಲೇ ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಂಘಟನೆ ಮಾಡುತ್ತಿದ್ದಾರೆ. ಸೆ. 2ರಿಂದ ಆರಂಭವಾಗುವ ಸದಸ್ಯತಾ ಅಭಿಯಾನಕ್ಕೆ ಈಗಿನಿಂದಲೇ ಕಾರ್ಯಕರ್ತರು ಅಣಿಗೊಳ್ಳಬೇಕಿದ್ದು, ಪ್ರತಿ ಬೂತ್ನಲ್ಲಿ 15 ದಿನಗಳ ಅವಧಿಯಲ್ಲಿ ಕನಿಷ್ಠ 300 ಸದಸ್ಯರನ್ನು ಮಾಡಬೇಕು. ಜಿಲ್ಲೆಯಲ್ಲಿ ಕನಿಷ್ಠ 3 ಲಕ್ಷ ಸದಸ್ಯರ ನೋಂದಣಿ ಆಗಬೇಕು ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಏಕವಚನದಲ್ಲಿ ಮಾತನಾಡುವ ಸಂಸ್ಕೃತಿಯವರು. ಗೌರವ ಕೊಟ್ಟು ಗೌರವ ಪಡೆಯುವ ಸಂಸ್ಕೃತಿಯವರಲ್ಲ. ಅಧಿವೇಶನದಲ್ಲಿ ನಾವು ಬಾವಿಗಿಳಿದ ವೇಳೆ ಸಭಾಧ್ಯಕ್ಷರೂ ಸಹ ಅಜೆಂಡಾದಲ್ಲಿ ಇಲ್ಲದ ವಿಷಯಕ್ಕೆ ಅವಕಾಶ ಮಾಡಿಕೊಟ್ಟು ನಾಲ್ಕು ತಾಸು ನಾವು ನಿಂತೇ ಇರುವಂತೆ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಡಿ.ಕೆ. ಶಿವಕುಮಾರ ಅವರಿಗೆ ನಾನು ಏಕವಚನದಲ್ಲಿಯೇ ಮಾತನಾಡುತ್ತೇನೆ. ಪಕ್ಷದ ವರಿಷ್ಠರು ತಡೆದರೂ ನಾನು ಏಕವಚನದಲ್ಲಿಯೇ ಮಾತನಾಡುತ್ತೇನೆ ಎಂದರು.
ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ರ್ಕ ಮಾತನಾಡಿದರು. ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಶಾಸಕ ಶಾಂತಾರಾಮ ಸಿದ್ದಿ, ಮಾಜಿ ಶಾಸಕರಾದ ಸುನೀಲ ನಾಯ್ಕ, ವಿವೇಕಾನಂದ ವೈದ್ಯ, ಪ್ರಮುಖರಾದ ವೆಂಕಟೇಶ ನಾಯ್ಕ, ಕೆ.ಜಿ. ನಾಯ್ಕ, ಎಂ. ಜಿ. ನಾಯ್ಕ, ಸಂತೋಷ ತಳವಾರ, ಈಶ್ವರ ನಾಯ್ಕ, ವಿನೋದ ನಾಯ್ಕ, ರಾಘವೇಂದ್ರ ಭಟ್ ಇತರರಿದ್ದರು.
ಹೆಬ್ಬಾರ್ ಬಗ್ಗೆ ರೂಪಾಲಿ ಅಸಮಾಧಾನ
ಶಿವರಾಮ ಹೆಬ್ಬಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಸಿದವರೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು. ಜಿಲ್ಲೆಯಲ್ಲಿ ಸಚಿವರಾಗುವ ಸಾಧ್ಯತೆ ಅನೇಕರಿಗಿದ್ದರೂ ಯಡಿಯೂರಪ್ಪನವರೇ ಹೆಬ್ಬಾರ್ ಅವರಿಗೆ ಈ ಸ್ಥಾನ ಕೊಟ್ಟಿದ್ದರು. ಬಿಜೆಪಿ ಸರ್ಕಾರ ಬಂದರೆ ಸಾಕು ಎಂದು ನಾವೂ ಸಹಕಾರ ಕೊಟ್ಟಿದ್ದೇವೆ. ಆದರೆ, ಈಗ ಕಾಂಗ್ರೆಸ್ ಕಡೆ ಕಾಲಿಟ್ಟಿರುವ ಹೆಬ್ಬಾರ್, ಮುಡಾ ಹಗರಣದಲ್ಲಿ ಮಾಜಿ ಸಚಿವರೂ ಇದ್ದಾರೆ, ಯಡಿಯೂರಪ್ಪನವರೂ ಇದ್ದಾರೆ ಎನ್ನ ತೊಡಗಿದ್ದಾರೆ. ಯಾವ ಪಕ್ಷದಲ್ಲಿ ತಾನು ನಿಂತು ಮಾತನಾಡುತ್ತಿದ್ದೇನೆ ಎಂಬುದನ್ನು ಮೊದಲು ಅವರು ಸ್ಪಷ್ಟಪಡಿಸಲಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಗ್ರಹಿಸಿದರು. ಮಾನ ಮರ್ಯಾದೆ ಇದ್ದರೆ ತಕ್ಷಣವೇ ಪಕ್ಷ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬೀಳಲಿ. ಇಲ್ಲಿಯೇ ಇದ್ದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಬದಲು ರಾಜೀನಾಮೆ ನೀಡಿ ಹೋಗಿ. ನಮಗೆ ಪಕ್ಷ ಸಂಘಟಿಸುವುದು ತಿಳಿದಿದೆ ಎಂದರು.
ಮಾತಾಡಲೂ ಬಾರದವರ ಆರೋಪಕ್ಕೆ ತಲೆ ಕೆಡಿಸಿಕೊಳ್ಳಲ್ಲ
ಯಡಿಯೂರಪ್ಪನವರಿಂದಾಗಿಯೇ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ಸತ್ಯ. ಅದೇ ರೀತಿ ನಾವು 17 ಜನ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದರಿಂದಲೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದೂ ಅಷ್ಟೇ ಸತ್ಯ. ಯಡಿಯೂರಪ್ಪನವರ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಾನು ಎಂದಿಗೂ ಮಾತನಾಡಿಲ್ಲ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.
ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನೀಡಿದ ಹೇಳಿಕೆ ಕುರಿತಂತೆ ಮಾಧ್ಯಮದೊಂದಿಗೆ ನಗರದಲ್ಲಿ ಮಂಗಳವಾರ ಅವರು ಮಾತನಾಡಿದರು. ಮಾತನಾಡುವ ಸಂಸ್ಕೃತಿಯೇ ತಿಳಿಯದವರ ಮಾತಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಈಗ ಬಿಜೆಪಿ, ಕಾಂಗ್ರೆಸ್ನಲ್ಲಿ ಇಲ್ಲ. ನಾನೊಬ್ಬ ಶಾಸಕ ಎಂದರು.
ಬ್ಯಾಂಕ್ನಲ್ಲಿ ಕೆಲವರು ನಕಲಿ ಕಾಗದಪತ್ರ ಸಲ್ಲಿಸಿ ಕಾರ್ ಸಾಲ ಪಡೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್, 42 ಕಾರ್ಗಳನ್ನು ನಕಲಿ ದಾಖಲೆ ನೀಡಿ ಖರೀದಿಸಿದ್ದರು. 22 ಕಾರುಗಳ ಸಾಲವನ್ನು ಅವರು ಮರುಪಾವತಿಸಿದ್ದಾರೆ. ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಯಾವ ಕಾರಣಕ್ಕೂ ಹಣ ಬಾಕಿ ಆಗದೇ ಸಂಪೂರ್ಣ ಹಣವನ್ನು ವಾಪಸ್ ಮಾಡಿಕೊಳ್ಳುತ್ತೇವೆ ಎಂದರು. ಇನ್ನು ಮುಂದೆ ವಾಹನ ಸಾಲ ಮಂಜೂರಾತಿಗೆ ಮುನ್ನ ವಾಹನ ಶೋರೂಂಗೆ ನಮ್ಮ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ ಬಳಿಕವೇ ಹಣ ಬಿಡುಗಡೆ ಮಾಡುತ್ತೇವೆ ಎಂದರು.