ಆಲೂರು: ಕರ್ನಾಟಕದಿಂದ ದೆಹಲಿಗೆ ಪ್ರತಿಭಟನೆಗೆ ತೆರಳುತ್ತಿದ್ದ 70 ರೈತರನ್ನು ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಲೂರು ತಾಲೂಕಿನ ನಾಲ್ಕು ಹೋಬಳಿಯ ವಿವಿಧ ಭಾಗಗಳಿಂದ ರೈತರು ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತೆರಳುತ್ತಿದ್ದರು.
ಸದ್ಯ ರೈತರನ್ನು ಕಲ್ಯಾಣ ಮಂಟಪವೊಂದರಲ್ಲಿ ಇರಿಸಿಕೊಳ್ಳಲಾಗಿದೆ. ರೈತ ವಿರೋಧಿ ಮಧ್ಯಪ್ರದೇಶ ಪೊಲೀಸರಿಗೆ ಧಿಕ್ಕಾರ ಎಂದು ಅಲ್ಲಿಯೇ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ.
ಈ ವೇಳೆ ಆಲೂರು ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಧರ್ಮರಾಜ್ ಮಾತನಾಡಿ, ಮಂಗಳವಾರ ನಡೆಯಲಿರುವ ಪ್ರತಿಭಟನೆಗಾಗಿ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ ಸುಮಾರು ರೈತರನ್ನು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸೋಮವಾರ ರಾತ್ರಿ ಬಂಧಿಸಲಾಗಿದೆ. ರಾತ್ರಿ ಹೊತ್ತು ರೈಲಿನಲ್ಲಿ ಮಲಗಿದ್ದ ರೈತರನ್ನು ಪೊಲೀಸರು ಗೂಂಡಾಗಳ ರೀತಿಯಲ್ಲಿ ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ವೇಳೆ ಮಹಿಳಾ ಹೋರಾಟಗಾರ್ತಿಯೊಬ್ಬರಿಗೆ ಗಾಯಗಳಾಗಿವೆ ಎಂದು ತಿಳಿಸಿದರು.