ಜಿಲ್ಲೆ

7 ಸಾವಿರ ಕ್ಷೌರಿಕರು, ಮಡಿವಾಳರಿಗೆ ಇನ್ನೂ ಸಿಕ್ಕಿಲ್ಲ ಮಾರ್ಗ

ಹುಬ್ಬಳ್ಳಿ: ಕರೊನಾ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೀಡಾದ ಅಸಂಘಟಿತ ಕಾರ್ವಿುಕರಿಗೆ ರಾಜ್ಯ ಸರ್ಕಾರ ಘೋಷಿಸಿದ 1,610 ಕೋಟಿ ರೂ. ಪ್ಯಾಕೇಜ್ ಹಣ ಸದ್ಯಕ್ಕೆ ಫಲಾನುಭವಿಗಳಿಗೆ ತಲುಪುವ ನಿರೀಕ್ಷೆಗಳಿಲ್ಲ.

ಅಸಂಘಟಿತ ಕಾರ್ವಿುಕರ ಪೈಕಿ ಕಟ್ಟಡ ಕೆಲಸಗಾರರು, ಕ್ಷೌರಿಕರು, ಮಡಿವಾಳರು, ಆಟೋ ಚಾಲಕರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಹೆಸರು ನೋಂದಾಯಿಸಿರುವ ಕಟ್ಟಡ ಕಾರ್ವಿುಕರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.

ಆದರೆ, 2016ರ ಮೊದಲು ನೋಂದಣಿ ಮಾಡಿಕೊಂಡ ಕಾರ್ವಿುಕರನ್ನು ಬದಿಗಿಟ್ಟು, ನಂತರದಲ್ಲಿ ನೋಂದಣಿ ಮಾಡಿದ ಕಾರ್ವಿುಕರ ಮಾಹಿತಿ ಆನ್​ಲೈನ್​ನಲ್ಲಿ ಲಭ್ಯ ಇರುವುದರಿಂದ ಅವರಿಗೆಲ್ಲ ಮೊದಲ ಕಂತಿನ ಹಣ (2 ಸಾವಿರ ರೂ.) ಬಿಡುಗಡೆ ಮಾಡಲಾಗಿದ್ದು, ಹಿರಿಯರನ್ನು ಬದಿಗಿಟ್ಟಂತಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದಂತೆ ಕಟ್ಟಡ ಕಾರ್ವಿುಕರು, ಕ್ಷೌರಿಕರು, ಮಡಿವಾಳರು, ಆಟೋ ಚಾಲಕರಿಗೆ ತಲಾ 5000 ರೂ. ನೀಡಲು ಉದ್ದೇಶಿಸಲಾಗಿದೆ. ಆಟೋ ಚಾಲಕರ ಲೈಸನ್ಸ್ ಸೇರಿ ಅಗತ್ಯ ದಾಖಲೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇರುವುದರಿಂದ ಅವರು ಅಲ್ಲಿಯೇ ವಿವರ ಸಲ್ಲಿಸಿ ಮುಂದಿನ ಪ್ರಕ್ರಿಯೆ ಪೂರೈಸಿಕೊಳ್ಳಬಹುದು.

ಇನ್ನು ಉಳಿದ ಕಾರ್ವಿುಕರ ವಿವರಗಳನ್ನು ಪಡೆದಿರುವ ಇಲ್ಲಿಯ ಕಾರ್ವಿುಕ ಇಲಾಖೆ, ಅಗತ್ಯ ದಾಖಲೆಗಳೊಂದಿಗೆ ಕೇಂದ್ರ ಕಚೇರಿಗೆ ಮಾಹಿತಿ ರವಾನಿಸುವ ಕೆಲಸ ಮಾಡಬೇಕಾಗಿದೆ. ಆದರೆ, ಕಳೆದ ಒಂದು ವಾರದಿಂದ ವಲಸೆ ಕಾರ್ವಿುಕರನ್ನು (ಉತ್ತರ ಭಾರತೀಯರು) ತವರೂರಿಗೆ ಕಳಿಸುವ ಸಮಸ್ಯೆ ಬಂದೆರಗಿದ್ದರಿಂದ ಕಾರ್ವಿುಕ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಅದರಲ್ಲಿ ಬಿಜಿಯಾಗಿದ್ದಾರೆ. ಅದರಿಂದ ಕಟ್ಟಡ ಕಾರ್ವಿುಕರ ಮಾಹಿತಿ ಪರಿಶೀಲಿಸಿ ಕೇಂದ್ರ ಕಚೇರಿಗೆ ಕಳಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಹೊಸದಾಗಿ ಅರ್ಜಿ ಸಲ್ಲಿಸುವವರಿಗಾಗಿ ಕಚೇರಿ ಬಾಗಿಲಲ್ಲಿ ಬಾಕ್ಸ್ ಇಡಲಾಗಿದ್ದು, ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್ ಜೆರಾಕ್ಸ್​ನೊಂದಿಗೆ ಅದರಲ್ಲಿ ಹಾಕಬಹುದಾಗಿದೆ. ಹೀಗೆ ಸಂಗ್ರಹವಾದ ಅರ್ಜಿಗಳನ್ನು ಪರಿಶೀಲಿಸಬೇಕಾದ ಹೊಣೆಯೂ ಕಾರ್ವಿುಕ ಅಧಿಕಾರಿಗಳ ಮೇಲಿದೆ.

2016ಕ್ಕಿಂತ ಮೊದಲು ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡ ಅಂದಾಜು 21,602 ಕಟ್ಟಡ ಕಾರ್ವಿುಕರಿಗೆ ಆನ್​ಲೈನ್ ಪೇಮೆಂಟ್ ಆಗಿಲ್ಲ. ಹಾಗಾಗಿ ಅನೇಕರು ಇಲಾಖೆ ಕಚೇರಿಗೆ ಬಂದು ವಿಚಾರಿಸುತ್ತಿದ್ದಾರೆ. ಅವರ ಮಾಹಿತಿ ಸಂಗ್ರಹಿಸಲಾಗಿದ್ದು, ಇನ್ನೊಂದು ವಾರದಲ್ಲಿ ಕೇಂದ್ರ ಕಚೇರಿಗೆ ಕಳಿಸುವ ಭರವಸೆ ನೀಡುತ್ತಾರೆ ಅಧಿಕಾರಿಗಳು.

ಈ ಮಧ್ಯೆ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿ ಕೇಂದ್ರ ಕಚೇರಿಯವರು ಆನ್​ಲೈನ್​ನಲ್ಲಿ ಸಿಕ್ಕ ಮಾಹಿತಿ ಆಧರಿಸಿ ಧಾರವಾಡ ಜಿಲ್ಲೆಯ 13,976 ಕಟ್ಟಡ ಕಾರ್ವಿುಕರಿಗೆ ಪ್ರಾಥಮಿಕ ಹಂತದ 2 ಸಾವಿರ ರೂ. ಸಂದಾಯ ಮಾಡಿದ್ದು, 2016ಕ್ಕಿಂತ ಮೊದಲಿನವರ ದಾಖಲೆ ಆನ್​ಲೈನ್​ನಲ್ಲಿ ಇಲ್ಲ. ಅವರೆಲ್ಲರ ವಿವರ ದಾಖಲಿಸಿ ಅವರಿಗೂ ಪರಿಹಾರ ಸಿಗುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ಇಲಾಖೆ ಅಧಿಕಾರಿಗಳ ಮೇಲಿದೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 61ಸಾವಿರ ಕಟ್ಟಡ ಕಾರ್ವಿುಕರಿದ್ದರು. ಅವರ ಪೈಕಿ ಪ್ರಸ್ತುತ ದಾಖಲೆ ನೀಡಲು ತಿಳಿಸಿದಾಗ 21,602 ಜನರು ಮಾತ್ರ ನೀಡಿದ್ದಾರೆ. 5500 ಕ್ಷೌರಿಕರು, 1300 ಮಡಿವಾಳರು ಧಾರವಾಡ ಜಿಲ್ಲೆಯಲ್ಲಿದ್ದು, ಅವರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹುಬ್ಬಳ್ಳಿಯ ಸಹಾಯಕ ಕಾರ್ವಿುಕ ಆಯುಕ್ತೆ ಮೀನಾ ಪಾಟೀಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಸೇವಾ ಸಿಂಧು:

ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಪ್ಯಾಕೇಜ್ ಹಣ ಪಡೆಯಲು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಹಾಗಾಗಿ ಯೋಜನೆ ಲಾಭ ಪಡೆಯಲು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅಲೆದಾಡುತ್ತಿದ್ದಾರೆ.

ಹಮಾಲಿ ಕಾರ್ವಿುಕರಿಗಿಲ್ಲ

ಎಪಿಎಂಸಿ ಹಮಾಲಿ ಕಾರ್ವಿುಕರಿಗೆ ಈ ಯೋಜನೆ ಲಾಭ ಇಲ್ಲ. ಲಾಕ್​ಡೌನ್ ಇದ್ದರೂ ಎಪಿಎಂಸಿ ಚಟುವಟಿಕೆ ನಿಂತಿಲ್ಲ. ಹಾಗಾಗಿ ಅವರಿಗೆ ಪರಿಹಾರ ಹಣ ನೀಡಲಾಗುತ್ತಿಲ್ಲ ಎನ್ನಲಾಗುತ್ತಿದೆ. ಆದರೆ, ಲಾಕ್​ಡೌನ್​ನಿಂದಾಗಿ ಯಾವುದೇ ಸಾರಿಗೆ ವ್ಯವಸ್ಥೆ ಇರದೇ ಹಮಾಲಿ ಕಾರ್ವಿುಕರು ಕೆಲಸಕ್ಕೆ ಹಾಜರಾಗಿಲ್ಲ. ಅಲ್ಲದೆ, ಕೆಲಸ ಬಹಳಷ್ಟು ಕಡಿಮೆ ಇತ್ತು. ನೂರು ಜನ ಕಾರ್ವಿುಕರಲ್ಲಿ ಕೇವಲ 10- 20 ಜನ ಹತ್ತಿರ ಇರುವವರು ಕೂಲಿಗೆ ಬಂದಿದ್ದಾರೆ. ಹೀಗಿರುವಾಗ ಎಲ್ಲ ಹಮಾಲಿಗಳಿಗೂ ಲಾಕ್​ಡೌನ್ ಪರಿಹಾರ ಹಣ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಕಾರ್ವಿುಕ ಸಂಘದ ಬಸವಣ್ಣೆಪ್ಪ ನೀರಲಗಿ ಮನವಿ ಮಾಡಿದ್ದಾರೆ.