ಜಿಲ್ಲೆ

7 ಕೋಟಿ ರೂ. ಸಿಎಸ್​ಆರ್ ನಿಧಿ

ಹುಬ್ಬಳ್ಳಿ: ಕೋಲ್​ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೆರೇಶನ್ ಲಿಮಿಟೆಡ್, ಟಾಟಾ, ಏಕಸ್ ಸೇರಿದಂತೆ ಹಲವು ಕಂಪನಿಗಳು ಸಿಎಸ್​ಆರ್ ನಿಧಿಯಡಿ ಜಿಲ್ಲೆಯಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಎದುರಿಸಲು 7 ಕೋಟಿ ರೂ. ಸಹಾಯ ನೀಡಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಉದ್ಯಮಿದಾರರು ಹಾಗೂ ಕೈಗಾರಿಕಾ ಸಂಘದ ಪ್ರತಿನಿಧಿಗಳೊಂದಿಗೆ ಕೋವಿಡ್-19 ನಿಯಂತ್ರಣ ಮತ್ತು ಸಿಎಸ್​ಆರ್ ನಿಧಿ ಬಳಕೆ ಕುರಿತು ಶುಕ್ರವಾರ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆರೋಗ್ಯ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಗಳ ಸಿಎಸ್​ಆರ್ ನಿಧಿ ಬಳಸಿಕೊಳ್ಳಲಾಗುತ್ತದೆ. ಕೋವಿಡ್ ಕೇರ್​ಸೆಂಟರ್ ಹಾಗೂ ಆಸ್ಪತ್ರೆಗಳಿಗೆ ಅಗತ್ಯವಿರುವ ವೆಂಟಿಲೇಟರ್, ಬೆಡ್, ಪಲ್ಸ್ ಆಕ್ಸಿಮೀಟರ್, ಆಕ್ಸಿಜನ್, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೇಜರ್ ಸೇರಿ ಹಲವು ಸೌಕರ್ಯ ಕಲ್ಪಿಸಲಾಗುವುದು ಎಂದರು.

ಲಕ್ಷಣ ರಹಿತ ಸೋಂಕಿತರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಸ್ಟೆಲ್​ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇಲ್ಲಿಗೆ ಆಟದ ಸಾಮಗ್ರಿ, ಪುಸ್ತಕ, ಟಿವಿ, ಆರ್​ಒ ಪ್ಲಾಂಟ್, ಬಿಸಿ ನೀರು ತಯಾರಿಸುವ ಘಟಕಗಳನ್ನು ಸಿಎಎಸ್​ಆರ್ ನಿಧಿಯಡಿ ಕಂಪನಿಗಳು ನೀಡಬಹುದು. ಸಾಂಕ್ರಾಮಿಕ ರೋಗ ನಿಯಂತ್ರಣ ಬಳಿಕ ಇವು ವಿದ್ಯಾರ್ಥಿಗಳಿಗೆ ಬಳಕೆಯಾಗಲಿವೆ ಎಂದರು.

ಜಿ.ಪಂ. ಸಿಇಒ ಡಾ.ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಅಬಕಾರಿ ಉಪ ಆಯುಕ್ತ ಶಿವನಗೌಡ ಪಾಟೀಲ್, ಹೆಸ್ಕಾಂ ಎಂ.ಡಿ. ಇಬ್ರಾಹಿಂ ಮೈಗೂರ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಿಎಚ್​ಒ ಡಾ. ಯಶವಂತ ಮದೀನಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಮೋಹನ ಭರಮಕ್ಕನವರ, ತಹಸೀಲ್ದಾರರಾದ ಶಶ್ರಿಧರ ಮಾಡ್ಯಾಳ, ಪ್ರಕಾಶ ನಾಸಿ, ಉದ್ಯಮಿಗಳು ಪಾಲ್ಗೊಂಡಿದ್ದರು.