ಜಿಲ್ಲೆ

7 ಕೆರೆ ತುಂಬಿಸಲು ರೂ. 24 ಕೋಟಿ ಮಂಜೂರು

ರಟ್ಟಿಹಳ್ಳಿ: ತುಂಗಭದ್ರಾ ನದಿಯಿಂದ ಬುಳ್ಳಾಪುರ-ಹಾಡೆ ಏತ ನೀರಾವರಿ ಯೋಜನೆ ಮೂಲಕ ಭಗವತಿ ಕೆರೆ, ಕಡೂರ ಕೆರೆ ಸೇರಿ ಒಟ್ಟು 7 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 24 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ತಾಲೂಕಿನಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ತಾಲೂಕಿನ ಕಣವಿಸಿದ್ಧಗೇರಿ, ಕಡೂರ, ಕುಡುಪಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಈ ಯೋಜನೆಯಿಂದ ಈ ಭಾಗದ ಕೆರೆಗಳು ತುಂಬುವ ಮೂಲಕ ಅನೇಕ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತದೆ. ಕೆರೆಗಳಲ್ಲಿ ಸದಾ ನೀರು ತುಂಬುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಸರ್ಕಾರದಿಂದ ಅನುದಾನಗಳು ಮತ್ತು ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕಾದರೆ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಮುಂದಿನ ಒಂದು ತಿಂಗಳ ಅವಧಿಯೊಳಗಾಗಿ ಗುಡ್ಡದಮಾದಾಪುರ ಮತ್ತು ದುರ್ಗಾದೇವಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಚಾಲನೆ ನೀಡಲಾಗುವುದು. ಶೀಘ್ರದಲ್ಲಿ ರೈತರ ಮಕ್ಕಳಿಗೆ 2,500 ರಿಂದ 11,000 ರೂಪಾಯಿವರೆಗೆ ವಾರ್ಷಿಕ ಶಿಷ್ಯವೇತನ ಜಾರಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಗೊಬ್ಬರ, ಬಿತ್ತನೆ ಬೀಜ ಸೇರಿ ಎಲ್ಲ ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ನೀಡುತ್ತಿದೆ ಎಂದರು.

ರೈತರ ಸಬಲೀಕರಣಕ್ಕಾಗಿ ಕೃಷಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೆ ಮಾಡಲಾಗುತ್ತಿದೆ. ರೈತರು ಕೇವಲ ಒಂದೆರಡು ಬೆಳೆಗಳಿಗೆ ಮಾರು ಹೋಗಬಾರದು. ಮಿಶ್ರಬೇಸಾಯ ಮತ್ತು ಉಪಕಸುಬುಗಳಾದ ಹೈನಗಾರಿಕೆ, ಕುರಿಸಾಕಾಣಿಕೆ ಹಾಗೂ ವಿವಿಧ ಕೆಲಸಗಳಲ್ಲಿ ನಿರತರಾಗಬೇಕು. ರೈತರು ಆಧುನಿಕ ತಂತ್ರಜ್ಞಾನ ಬೇಸಾಯ ಪದ್ದತಿ ಅಳವಡಿಸಿಕೊಳ್ಳಲು ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ:

ತಾಲೂಕಿನ ಇಂಗಳಗೊಂದಿ, ಸತ್ತಗಿಹಳ್ಳಿ, ಶಿರಗಂಬಿ ಗ್ರಾಮಗಳಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆಗೆ ಭೂಮಿಪೂಜೆ ನೇರವೇರಿಸಲಾಯಿತು.

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾಪಂ ಮಾಜಿ ಸದಸ್ಯ ಆರ್.ಎನ್. ಗಂಗೋಳ, ತಹಸೀಲ್ದಾರ್ ಅರುಣಕುಮಾರ ಕಾರಗಿ, ಜೆ.ಪಿ. ಪ್ರಕಾಶ, ಕಡೂರ ಗ್ರಾಪಂ ಅಧ್ಯಕ್ಷ ಜಗದೀಶ ಮೂಲಿಮನಿ, ಯುಟಿಪಿ ಅಧಿಕಾರಿ ಕುಮಾರಸ್ವಾಮಿ, ಜಗದೀಶಗೌಡ ಲಕ್ಕನಗೌಡ್ರ, ಗ್ರಾಪಂ ಸದಸ್ಯ ವೀರೇಶ ಹೊಸಳ್ಳಿ, ಕಣವಿಸಿದ್ದಗೇರಿ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಹಿತ್ತಲಮನಿ, ಗ್ರಾಪಂ ಸದಸ್ಯ ಸಿದ್ದೇಶ ಬಣಕಾರ, ವೀರನಗೌಡ ಮಕರಿ, ದೇವರಾಜ ನಾಗಣ್ಣನವರ, ಶಂಕ್ರಗೌಡ ಚೆನ್ನಗೌಡ್ರ ಇತರರು ಉಪಸ್ಥಿತರಿದ್ದರು.

ರಾಜೀನಾಮೆಯಿಂದ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ

ನಮ್ಮ ರಾಜೀನಾಮೆಯಿಂದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡರು. ಕೇಂದ್ರದ ನಿರ್ದೇಶನದಂತೆ ಅವರು ರಾಜೀನಾಮೆ ನೀಡಿದ್ದು, ಒಂದೆಡೆ ನೋವುಂಟು ಮಾಡಿದರೆ, ಹಾವೇರಿ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಲಭಿಸಿರುವುದು ಸಂತಸ ತಂದಿದೆ. ನಮ್ಮ ರಾಜೀನಾಮೆ ಹಾವೇರಿ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಲಭಿಸುವಂತೆ ಮಾಡಿರುವುದು ಈ ಕ್ಷೇತ್ರದ ಮತದಾರರ ಸೌಭಾಗ್ಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.