ಜಿಲ್ಲೆ

7 ಎಪಿಎಂಸಿಗಳಿಗೆ ಶೀಘ್ರದಲ್ಲೆ ಚುನಾವಣೆ ; ಮತದಾರರ ಪಟ್ಟಿ ತಯಾರಿಕೆಗೆ ಸೂಚನೆ ;  ಗರಿಗೆದರಿದ ರಾಜಕೀಯ ಚಟುವಟಿಕೆ

Tumakuru

ತುಮಕೂರು : ನಾಲ್ಕು ವರ್ಷದ ಹಿಂದೆಯೇ ಅವಧಿ ಪೂರ್ಣಗೊಳಿಸಿರುವ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿ ಜಿಲ್ಲೆಯ ಏಳು ಎಪಿಎಂಸಿಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

2022 ಫೆ.12ಕ್ಕೆ ಅವಧಿ ಪೂರ್ಣಗೊಳಿಸುವ ಮಧುಗಿರಿ ಹಾಗೂ ಮಾರ್ಚ್‌ನಲ್ಲಿ ಗುಬ್ಬಿ, ಪಾವಗಡ, ಕುಣಿಗಲ್, ತುರುವೇಕೆರೆ ಹಾಗೂ ಶಿರಾ ಎಪಿಎಂಸಿಗಳಿಗೆ ಶೀಘ್ರದಲ್ಲಿಯೇ ಚುನಾವಣೆ ಘೋಷಣೆಯಾಗಲಿದ್ದು, 18 ವರ್ಷ ಮೇಲ್ಪಟ್ಟ ಕೃಷಿಕ ಮತದಾರರ ಪಟ್ಟಿ ಸಿದ್ಧಪಡಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಕ್ಷೇತ್ರದ ಹುಳಿಯಾರು ಎಪಿಎಂಸಿ ಸದಸ್ಯರ ಅಧಿಕಾರ ಅವಧಿ 2018ರ ಜ.16ರಂದೇ ಪೂರ್ಣವಾಗಿತ್ತು. ಕಳೆದ 4 ವರ್ಷದಿದ ಖಾಲಿ ಉಳಿದಿದ್ದ ಸದಸ್ಯ ಸ್ಥಾನಗಳಿಗೆ ಈ ಹಿಂದೆಯೇ ಮೀಸಲಾತಿ ಹಾಗೂ ಚುನಾವಣೆ ಘೋಷಣೆಯಾಗಿದ್ದರೂ ವಿವಿಧ ಕಾರಣದಿಂದ ಚುನಾವಣೆಯನ್ನೂ ಮುಂದೂಡುತ್ತಲೇ ಬಂದಿದ್ದು, ಕೃಷಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಸ್ತುತ ಮಧುಗಿರಿ, ಪಾವಗಡ ಎಪಿಎಂಸಿ ಕಾಂಗ್ರೆಸ್ ವಶದಲ್ಲಿದೆ, ತುರುವೇಕೆರೆ, ಶಿರಾ, ಗುಬ್ಬಿ, ಕುಣಿಗಲ್‌ನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷರಾಗಿದ್ದು, ಸ್ಥಳೀಯ ಶಾಸಕರು ಹಾಗೂ ವಿರೋಧ ಪಕ್ಷಗಳಿಗೆ ಅಧಿಕಾರ ಹಿಡಿಯುವುದು ಪ್ರತಿಷ್ಠೆ ಎನಿಸಿಕೊಂಡಿದೆ.

ಎಂಎಲ್‌ಎ ಅಭ್ಯರ್ಥಿಗಳಿಗೂ ಪ್ರತಿಷ್ಠೆ : ವಿಧಾನಸಭಾ ಚುನಾವಣೆಗೆ 18 ತಿಂಗಳು ಬಾಕಿ ಇರುವ ಈ ಸನ್ನಿವೇಶದಲ್ಲಿ ಎಪಿಎಂಸಿ ಚುನಾವಣೆಯೂ ಎದುರಾಗಿರುವುದು ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ಹುರಿಯಾಳುಗಳ ನೆಮ್ಮದಿ ಕೆಡಿಸಿದೆ. ತಾಪಂ, ಜಿಪಂ ಚುನಾವಣೆಯೇ ದೊಡ್ಡ ತಲೆನೋವು ತರಲಿದೆ ಎಂಬ ಲೆಕ್ಕಾಚಾರದ ನಡುವೆ ಎಪಿಎಂಸಿ ಚುನಾವಣೆ ಕೂಡ ಅಷ್ಟೇ ಆತಂಕ ಮೂಡಿಸಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಕಾರ್ಯತಂತ್ರ, ಸಂಪನ್ಮೂಲ ಹಾಗೂ ಸೋಲು-ಗೆಲುವು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಹಾಗಾಗಿ, ಅಭ್ಯರ್ಥಿಗಳು ಚುನಾವಣೆಗೆ ಹಿಂದೇಟು ಹಾಕುವುದು ಸಾಮಾನ್ಯ ಎನಿಸಿದ್ದರೂ ಚುನಾವಣೆ ಪ್ರತಿಷ್ಠೆ ಎನಿಸಿಕೊಂಡಿರುವುದು ಸುಳ್ಳಲ್ಲ.

ಜಮೀನು ಆರ್‌ಟಿಸಿ(ಪಹಣಿ) ಹೊಂದಿರುವ ಮನೆಯ ಯಜಮಾನ ಈ ಚುನಾವಣೆಯಲ್ಲಿ ಮತ ಚಲಾಯಿಸುವುದರಿಂದ ಮುಂದಿನ ವಿಧಾನಸಭಾ ಚುನಾವಣೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿದೆ. ಸೆಮಿಫೈನಲ್ ಎಂದು ಪರಿಗಣಿಸಿ ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಶಾಸಕರಾಗುವ ಕನಸು ಕಂಡವರಿಗಿದೆ.

ಚುನಾವಣೆಯೇ ಇಲ್ಲದೇ ‘ಡ್ರಾ’ ಆಗಿತ್ತು 12 ಲಕ್ಷ ರೂ.! : ಹುಳಿಯಾರು ಎಪಿಎಂಸಿ ಚುನಾವಣೆ ನಡೆಯದಿದ್ದರೂ ಚಿಕ್ಕನಾಯಕನಹಳ್ಳಿ ತಾಲೂಕು ಚುನಾವಣೆ ಶಾಖೆಯ ಖಾತೆಯಿಂದ 12 ಲಕ್ಷ ರೂ. ಬಿಡುಗಡೆಗೊಳಿಸಿಕೊಂಡು ಸ್ವಂತಕ್ಕೆ ಉಪಯೋಗಿಸಿದ್ದ ಪ್ರಕರಣ ಕೂಡ 2018ರಲ್ಲಿಯೇ ನಡೆದಿತ್ತು. ತಾಲೂಕು ಕಚೇರಿ ಚುನಾವಣಾ ಶಾಖೆಯ ಸಹಾಯಕ ರಂಗನಾಥ್ ಹಾಗೂ ಹಿಂದಿನ ತಹಸೀಲ್ದಾರ್ ಗಂಗೇಶ್ ವಿರುದ್ಧ ಆರೋಪ ಕೇಳಿಬಂದಿತ್ತು, ರಂಗನಾಥ್‌ನಿಂದ ಹಣ ಕಟ್ಟಿಸಿಕೊಂಡು ತಲೆದಂಡ ಕೂಡ ಮಾಡಲಾಗಿತ್ತು.

ಅವಧಿ ಪೂರ್ಣವಾಗಲಿರುವ ಮಧುಗಿರಿ, ಗುಬ್ಬಿ, ಪಾವಗಡ, ಕುಣಿಗಲ್, ತುರುವೇಕೆರೆ, ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಎಪಿಎಂಸಿ ಕೃಷಿಕರ ಕ್ಷೇತ್ರಗಳ ಕೈಬರಹದ ಮತದಾರರ ಪಟ್ಟಿ ಅಂತಿಮಗೊಳಿಸಲು ಅಧಿಕಾರಿಗಳನ್ನು ಅಧಿಕೃತಗೊಳಿಸಿ ನೇಮಕ ಮಾಡಲಾಗಿದೆ. ಪಟ್ಟಿ ತಯಾರಿಕೆ ಪ್ರಕ್ರಿಯೆ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ