ಜಿಲ್ಲೆ

7 ಜನ ದರೋಡೆಕೋರರ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ನಗರದ ಹೊರವಲಯದ ವರ್ತುಲ ರಸ್ತೆಯಲ್ಲಿ ವಾಹನ ಸವಾರರ ತಡೆದು ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಏಳು ಜನ ಆರೋಪಿಗಳನ್ನು ಬಂಧಿಸಿ 4100 ರೂ. ನಗದು ಸೇರಿದಂತೆ ಮೂರು ಮೊಬೈಲ್, ಎರಡು ದ್ವಿಚಕ್ರ ವಾಹನ, ಒಂದು ಚಾಕು, ಖಾರದ ಪುಡಿ, ಒಂದು ಆಟೋ ವಶಪಡಿಸಿಕೊಂಡಿದ್ದಾರೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತರನ್ನು ಗಂಗಾಧರನಗರದ ಭೀಮರಾವ ತಾವರಗೊಪ್ಪ, ರವಿ ಗೋಕಾಕ, ಕೆ.ಬಿ. ನಗರದ ದೀಪಕ ನರಗುಂದ, ಶ್ರೀನಿವಾಸ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ ಸಾತಪತಿ, ಗೋಪನಕೊಪ್ಪದ ನಾಗರಾಜ ಬಳ್ಳಾರಿ ಎಂದು ಗುರುತಿಸಲಾಗಿದೆ. ಬಂಧಿತರು ರೌಡಿಪಟ್ಟಿ, ಎಂಒಬಿಯಲ್ಲಿ ಇದ್ದವರ ಜತೆಗೆ ಗುತುತಿಸಿಕೊಂಡಿದ್ದರು ಎಂದು ವಿವರಿಸಿದರು.
ಆರೋಪಿಗಳೆಲ್ಲ ಕೂಡಿಕೊಂಡು ರಿಂಗ್ ರಸ್ತೆಯಲ್ಲಿ ಬೈಕ್ ಹಾಗೂ ಲಾರಿಗಳನ್ನು ಅಡ್ಡಗಟ್ಟಿ ಖಾರದಪುಡಿ ಎರಚಿ, ಚಾಕುವಿನಿಂದ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಇದರಿಂದ ವಾಹನ ಸವಾರರು ಭಯಪಡುವಂತಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆ ಪಿಐ ಎಸ್.ಆರ್. ನಾಯಿಕ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿತ್ತು ಎಂದರು.
ಫೋನ್ ಕಳ್ಳರ ಬಂಧನ: ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಮೊಬೈಲ್ ಫೋನ್ ಕಳವು ಮಾಡಿದ್ದವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಾಧರ ನಗರದ ವೆಂಕಟೇಶ ಕೊರವರ, ಮಂಟೂರ ರಸ್ತೆಯ ಸಿದ್ಧಾರೂಢ ದೊಡ್ಡಮನಿ ಬಂಧಿತರು. ಬಂಧಿತರಿಂದ ಒಟ್ಟು 3.20 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 22 ಮೊಬೈಲ್ ಫೋನ್, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮರಾಠ ಗಲ್ಲಿ ಹಾಗೂ ಶಿಗ್ಗಾಂವಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಫೋನ್‌ಗಳನ್ನು ಕದ್ದಿರುವುದಾಗಿ ಕಳ್ಳರು ಬಾಯ್ಬಿಟ್ಟಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಮನೆಗಳ್ಳಿ ಬಂದನ: ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದ ಮನೆಗಳ್ಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಗಂಗಾಧರನಗರದ ನಿವಾಸಿ ರತ್ನವ್ವ ಬಾಳಿಮೇಡ (45), ಕುಸುಗಲ್ ನಿವಾಸಿ ಮುಕ್ತುಂಸಾಬ್ ಕುಂಬಿ (27) ಎಂದು ಗುರುತಿಸಲಾಗಿದೆ. ಇವರಿಂದ 2.50 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ 4 ಬಂಗಾರದ ಬಳೆಗಳು, 50 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಬಂಗಾರದ ಚೈನು, 50 ಸಾವಿರ ರೂ. ಮೌಲ್ಯದ 6 ಜೊತೆ ಕಿವಿಯೋಲೆ, 1.50 ಲಕ್ಷ ರೂ ಮೌಲ್ಯದ ಬಂಗಾರದ ಪದಕ ಮತ್ತು ಎರಡು ತೋಡೆ, 10 ಗ್ರಾಂ ಬೆಳ್ಳಿ ಆಭರಣ, ಬಳೆ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 5.33 ಲಕ್ಷ ರೂ. ಇರಬಹುದು ಎಂದರು.
ಬಂಧಿತ ಮಹಿಳೆ ಸೇರಿ ಇಬ್ಬರ ಸೆ. 16ರಂದು ಅಶೋಕನಗರ ಠಾಣೆ ವ್ಯಾಪ್ತಿಯ ವಿಜಯನಗರದ ಮನೆ ನಂಬರ್ 113ರಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳವು ಮಾಡಿದ್ದರು. ಮನೆ ಮಾಲಕಿ ಸುಜಾತಾ ದೂರು ದಾಖಲಿಸಿದ್ದರು. ಈ ದೂರಿನನ್ವಯ ಅಶೋಕ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣಕುಮಾರ ಟಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಆಯುಕ್ತರು ತಿಳಿಸಿದರು.
ಡಿಸಿಪಿ ರವೀಶ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ಉಮೇಶ ಚಿಕ್ಕಮಠ ಇತರರು ಇದ್ದರು.