ಕಿಕ್ಕೇರಿ ಸಮೀಪದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆ ಕುರಿತು ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿರೆಡ್ಡಿ ಮಾಹಿತಿ ನೀಡಿದರು. ನವೀನ್, ಯಲ್ಲಪ್ಪ ಮತ್ತಿತರರಿದ್ದರು. 
ಜಿಲ್ಲೆ

7.03 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವಿಕೆ

ಕಿಕ್ಕೇರಿ: ಪ್ರಸಕ್ತ ಹಂಗಾಮಿನಲ್ಲಿ 7,03,184 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದ್ದು, ಮುಂದಿನ ಸಾಲಿನಲ್ಲಿ ಸುಮಾರು 8ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಯುವ ಗುರಿ ಹೊಂದಲಾಗಿದೆ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ. ರವಿರೆಡ್ಡಿ ತಿಳಿಸಿದರು.

ಸಮೀಪದ ಮಾಕವಳ್ಳಿ ಗ್ರಾಮದಲ್ಲಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಯುವಿಕೆ ಕಾರ್ಯ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಬ್ಬು ನುರಿಯುವಿಕೆ ಕುರಿತು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ 193.4 ಕೋಟಿ ರೂ.ಗಳ ಆರ್ಥಿಕ ವಹಿವಾಟು ನಡೆದಿದೆ. ಆದ್ಯತೆ ಮೇರೆಗೆ ಹಾಗೂ ಸಕಾಲದಲ್ಲಿ ಕಬ್ಬು ಬೆಳೆಗಾರರಿಗೆ ಹಣ ಪಾವತಿಸಲಾಗಿದೆ. ಕಾರ್ಖಾನೆಯ ಸ್ವಚ್ಛತೆ ಮುಗಿದ ನಂತರ ಪ್ರತಿವರ್ಷದಂತೆ ನಿಗದಿತ ಸಮಯದಲ್ಲಿ ಕಾರ್ಖಾನೆ ಆರಂಭಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಪರಿಸರ ಸ್ನೇಹಿಯಾಗಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿಕೊಂಡಿರುವುದು ಕಾರ್ಖಾನೆಯ ಸಾಧನೆಯಲ್ಲಿ ಒಂದಾಗಿದೆ ಎಂದರು.

ಈ ಬಾರಿ ಸಕ್ಕರೆ ಇಳುವರಿ 9.58ರಷ್ಟು ಬಂದಿದೆ. ಸಕಾಲದಲ್ಲಿ ಕಬ್ಬು ಕಟಾವು ಮಾಡಲು ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಸ್ಥಳೀಯ ರೈತರು ಕಬ್ಬು ಕಟಾವು ಮಾಡಲು ಮುಂದಾದಲ್ಲಿ ಕಾರ್ಮಿಕರ ಕೊರತೆ ನೀಗುವುದಲ್ಲದೆ ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಬಹುದಾಗಿದೆ. ಕಾರ್ಖಾನೆಯಿಂದ ಮಾಹಿತಿ ಪಡೆದು ಸುಧಾರಿತ ತಳಿಯ ಕಬ್ಬು ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಕಾರ್ಖಾನೆ ಉಪಪ್ರಧಾನ ವ್ಯವಸ್ಥಾಪಕ ಕೆ.ಬಾಬುರಾಜ್, ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗ ಮುಖ್ಯಸ್ಥ ನವೀನ್, ಭದ್ರತಾ ವಿಭಾಗ ಮುಖ್ಯಸ್ಥ ಯಲ್ಲಪ್ಪ, ಇಂಜಿನಿಯರಿಂಗ್‌ದ ವಿಭಾಗ ಮುಖ್ಯಸ್ಥ ಮೆಯನ್ ಮತ್ತಿತರರಿದ್ದರು.