ಜಿಲ್ಲೆ

6ನೇ ದಿನವೂ ಲಕ್ಷ ಲಕ್ಷ ಜನ :ಸರತಿ ಸಾಲಿನಲ್ಲಿ ಭಕ್ತರ ನರಳಾಟ

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬೆಯ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿರುವುದರಿಂದ ಅವರನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಇಂದಿನಿಂದ ಸಾರ್ವತ್ರಿಕ ರಜೆ ಇರುವುದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ.

ಕಳೆದ ಐದು ದಿನಗಳಿಂದ ದೇವಾಲಯಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬುಧವಾರ ಸಹ ದೇವಿ ದರ್ಶನಕ್ಕೆ ಲಕ್ಷಾಂತರ ಜನರು ಆಗಮಿಸಿದರು. ಆದರೆ, ವ್ಯವಸ್ಥೆಯ ಲೋಪದಿಂದಾಗಿ ಸಾರ್ವಜನಿಕರು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಆಕ್ರೋಷ ವ್ಯಕ್ತಪಡಿಸುತ್ತಿದರು. ತಾಳ್ಮೆಯನ್ನು ಕಳೆದುಕೊಂಡ ಜನರು ಬ್ಯಾರಿಕೆಡುಗಳನ್ನ ತಳ್ಳಿ ಒಳ ನುಗ್ಗುವಂತಹ ಪ್ರಯತ್ನಗಳು ಕೂಡ ಆಗಾಗ ನಡೆಯುತ್ತಲೇ ಇತ್ತು. ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಸಮಿತಿ ವಿವಿಐಪಿ ಪಾಸುಗಳನ್ನು ಬೇಕಾಬಿಟ್ಟಿ ಹಂಚಿಕೆ ಮಾಡಿರುವುದರಿಂದ ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೇವಿಯ ದರ್ಶನಕ್ಕೆ ಧರ್ಮ ದರ್ಶನದಲ್ಲಿ ದಿನವಿಡೀ ಕಿಲೋ ಮಿಟರ್‌ಗಟ್ಟಲೇ ಸರತಿ ಸಾಲಿನಲ್ಲಿ ನಡೆದುಕೊಂಡು ಬಂದು ದೇವಿಯ ದರ್ಶನಕ್ಕೆ ತೆರಳಬೇಕಾಗಿದೆ. ವಿವಿಐಪಿ ಮತ್ತು ಪಾಸ್ ಪಡೆದವರ ಪರಿಸ್ಥಿತಿಯೂ ಹೇಳತೀರದಾಗಿದೆ. 1000 ರೂ. ಕೊಟ್ಟು ದರ್ಶನಕ್ಕೆ ಬರುವವರೂ ಕೂಡ ಮೂರ್ನಾಲ್ಕು ಗಂಟೆ ಸಾಲಿನಲ್ಲಿ ನಿಂತು ದರ್ಶನ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ದುಡ್ಡು ಮಾಡುವ ದೃಷ್ಟಿಯಿಂದ ಈ ರೀತಿ ಜನರಿಗೆ ತೊಂದರೆ ಕೊಡುತ್ತಿದೆ ಎಂದು ಜನರು ಗಂಭೀರ ಆರೋಪ ಮಾಡುತ್ತಿದ್ದಾರೆ.

ಜಿಲ್ಲಾಡಳಿತ ಹಂಚಿರುವ ಪಾಸುಗಳ ಬಗ್ಗೆ ಪೊಲೀಸರಿಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ಅವರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಂದೋಬಸ್ತ್‌ಗೆ ಹಾಸನದ ಎಸ್ಪಿ ಮೊಹಮ್ಮದ್ ಸುಜಿತಾ, ಮಂಡ್ಯ ಮತ್ತು ಕೊಡಗು ಎಸ್‌ಪಿಯನ್ನು ನಿಯೋಜಿಸಲಾಗಿದೆ. ಇನ್ನುಳಿದಂತೆ ನಾಲ್ಕು ಜನ ಅಪರ ಪೊಲೀಸ್ ವರಿಷ್ಠಾಧಿಕಾರಿಗಳು, 13 ಜನ ಡಿವೈಎಸ್ಪಿಗಳು 39 ಜನ ಇನ್ಸ್‌ಪೆಕ್ಟರ್, 98 ಜನ ಸಬ್ ಇನ್ಸ್‌ಪೆಕ್ಟರ್, 117 ಎಎಸ್‌ಐ, 804 ಸಿಬ್ಬಂದಿ, 131 ಮಹಿಳಾ ಸಿಬ್ಬಂದಿ ಸೇರಿ ಒಟ್ಟು 1206 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ. ಇದಲ್ಲದೆ 10 ಕೆಎಸ್‌ಆರ್‌ಪಿ ತುಕಡಿ, 12 ಡಿಆರ್ ತುಕಡಿಗಳನ್ನು ಕೂಡ ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ಮಂಡ್ಯದಿಂದ 237, ಮೈಸೂರಿನಿಂದ 282, ಕೊಡಗಿನಿಂದ 165 ಹಾಗೂ ಹಾಸನದಿಂದ 522 ಪೊಲೀಸರು ಮತ್ತು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ

5.66 ಕೋಟಿ ರೂ. ಸಂಗ್ರಹ

ಟಿಕೆಟ್, ಲಡ್ಡು ಮಾರಾಟದಿಂದ ಬುಧವಾರ ಬೆಳಗ್ಗೆ 8ಗಂಟೆಗೆ ಕೊನೆಗೊಂಡಂತೆ ಒಟ್ಟು 5,66,10,800 ರೂ. ಸಂಗ್ರಹವಾಗಿದೆ. 300 ರೂಪಾಯಿಯ ಒಟ್ಟು 38,530 ಟಿಕೆಟ್‌ಗಳು ಮಾರಾಟವಾಗಿದ್ದು ಇದರಿಂದ ಒಟ್ಟು 1,19,59,000 ರೂ. ಸಂಗ್ರಹವಾಗಿದೆ. ಒಂದು ಸಾವಿರ ದರದ ಒಟ್ಟು 40,925 ಟಿಕೆಟ್‌ಗಳು ಮಾರಾಟವಾಗಿದ್ದು, ಇದರಿಂದ 4,09,25,000 ಸಂಗ್ರಹವಾಗಿದೆ. 68,780 ಲಡ್ಡು ಮಾರಾಟವಾಗಿದ್ದು, ಇದರಿಂದ 41,26,800 ರೂ. ಸಂಗ್ರಹವಾಗಿದೆ.

ಸಚಿವರನ್ನ ಮೆಚ್ಚಿಸಲು ಹೋಗಿ ಭಕ್ತರಿಗೆ ತೊಂದರೆ

ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಅಧಿಕಾರಿಗಳು ಜಿಲ್ಲಾ ಸಚಿವರನ್ನು ಮೆಚ್ಚಿಸಲು ಹೋಗಿ ಭಕ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರತೊಡಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರನ್ನು ಮೆಚ್ಚಿಸಲು ಹೋಗಿ ಭಕ್ತರಿಗೆ ನರಕಯಾತನೆ ಅನುಭವಿಸುವಂತೆ ಮಾಡುತ್ತಿರುವುದು ಎಷ್ಟ ಮಟ್ಟಿಗೆ ಸರಿ ಎಂದು ಜಿಲ್ಲೆಯ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದೇವರ ದರ್ಶನಕ್ಕೆ ಬರುವವ ರಾಜಕಾರಣಿಗಳು, ಗಣ್ಯರಿಗೆ ಹಾರ- ತುರಾಯಿ, ಪೇಟಾ ಸನ್ಮಾನ ಮಾಡುವಂತಹ ಹೊಸ ಪ್ರವೃತ್ತಿಯನ್ನು ಬೆಳೆಸಿಕೊಂಡು ಲಕ್ಷಗಟ್ಟಲೇ ಹಣ ಖರ್ಚು ಮಾಡುತ್ತಿರುವುದರ ಹುನ್ನಾರವಾದರೂ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.